ಮಡಿಕೇರಿ, ಡಿ. 14: ಚೆನ್ನೈನಾದ್ಯಂತ ಕೋಲಾಹಲ ಸೃಷ್ಟಿಸಿರುವ ವರ್ಧಾ ಚಂಡಮಾರುತದ ಬಿಸಿ ಕಾವೇರಿ ತವರು ಕೊಡಗಿಗೂ ಮುಟ್ಟಿದ್ದು, ಎರಡು ದಿನಗಳಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಮಂಜು ಮುಸುಕಿದ ವಾತಾವರಣ, ಕೊರೆಯುವ ಚಳಿಯೊಂದಿಗೆ ಕೊಡಗಿನ ಹವಮಾನದಲ್ಲಿ ವ್ಯತ್ಯಾಸವುಂಟಾಗಿದ್ದು, ಎಲ್ಲೆಡೆ ಮಳೆಗಾಲದ ಛಾಯೆ ಆವರಿಸಿದೆ.

ಮೊನ್ನೆ ದಿನ ನಡುರಾತ್ರಿಯವರೆಗೂ ಎಂದಿನಂತಿದ್ದ ವಾತಾವರಣ ಮಂಗಳವಾರ ಮುಂಜಾನೆಯಿಂದಲೇ ಬದಲಾವಣೆಗೊಂಡಿತ್ತು. ದಿಢೀರನೆ ತುಂತುರು ಮಳೆ ಸುರಿಯಲಾರಂಭಿಸಿತು. ಅತ್ತ ವೇಗವೂ ಇಲ್ಲದೇ ಇತ್ತ ನಿಧಾನಗತಿಯಲ್ಲಿ ಇಲ್ಲದೆ ಸುರಿಯುತ್ತಿರುವ ಮಳೆ, ಗಾಳಿ, ಮಂಜಿನ ಮಬ್ಬು ಪೆಟ್ಟಿಗೆಯೊಳಗಿದ್ದ ಸ್ವೆಟರ್, ಮೂಲೆ ಸೇರಿದ್ದ ಕೊಡೆ, ಮಳೆಕೋಟುಗಳನ್ನು ಮತ್ತೇ ಹೊರತೆಗೆಯುವಂತೆ ಮಾಡಿದೆ. ವೃದ್ಧರು, ಮಕ್ಕಳು ಕೊರೆಯುವ ಚಳಿ ಸಹಿಸಲಾಗದೆ ಪರದಾಡುವಂತಾಗಿದ್ದರೆ, ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಮನೆಯಿಂದ ಹೊರಬರಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿ ಹಣ್ಣಾಗಿ, ಭತ್ತ ಕಟ್ಟಾವಿಗೆ ಬರುವ ಸಮಯ ಇದಾಗಿದ್ದು, ದಿಢೀರ್ ಸುರಿಯುತ್ತಿರುವ ಮಳೆಯಿಂದಾಗಿ ರೈತರು, ಬೆಳೆಗಾರರು ಕಂಗಾಲಾಗಿದ್ದಾರೆ.

ಮಡಿಕೇರಿಯಲ್ಲಿ ಕಳೆದ 24 ಗಂಟೆಯಲ್ಲಿ 1.65 ಇಂಚು ಮಳೆಯಾಗಿದೆ. ಭಾಗಮಂಡಲದಲ್ಲಿ 4. ಮಿ.ಮೀ., ತಲಕಾವೇರಿಯಲ್ಲಿ 30 ಸೆಂಟ್ ಮಳೆ ಸುರಿದಿದೆ. ಕುಂದ ಗ್ರಾಮದಲ್ಲಿ 2 ಇಂಚು, ಬಾಡಗರಕೇರಿಯಲ್ಲಿ 3 ಇಂಚು, ಚೆನ್ನಯ್ಯನಕೋಟೆಯಲ್ಲಿ 1.13 ಇಂಚು, ಕೈಕೇರಿಯಲ್ಲಿ 1.62 ಇಂಚು, ಗೋಣಿಕೊಪ್ಪಲುವಿನಲ್ಲಿ 1.60 ಇಂಚು, ಕುಟ್ಟದಲ್ಲಿ 70 ಸೆಂಟ್, ಹಾತೂರುವಿನಲ್ಲಿ 1.87 ಇಂಚು, ಬಿ.ಶೆಟ್ಟಿಗೇರಿಯಲ್ಲಿ 2.90 ಇಂಚು, ಮಾಲ್ದಾರೆಯಲ್ಲಿ 1.35 ಇಂದು, ಅರ್ವತ್ತೋಕ್ಲುವಿನಲ್ಲಿ 1.75 ಇಂಚು, ಬಾಳೆಲೆಯಲ್ಲಿ 1.25 ಇಂಚು, ಪೊನ್ನಪ್ಪಸಂತೆಯಲ್ಲಿ 1.10 ಇಂಚು, ಬೇಗೂರಿನಲ್ಲಿ 3 ಇಂಚು, ವೆಸ್ಟ್‍ನೆಮ್ಮಲೆಯಲ್ಲಿ 1.06 ಇಂಚು ಮಳೆ ಸುರಿದಿರುವದಾಗಿ ವರದಿಯಾಗಿದೆ.