ಗೋಣಿಕೊಪ್ಪಲು, ಡಿ.14: ಒಂದಷ್ಟು ಖುಷಿ, ಒಂದಷ್ಟು ಬೇಸರದೊಂದಿಗೆ ಅಲ್ಲಲ್ಲಿ ಕೊಡಗಿನ ಸಾಂಪ್ರದಾಯಿಕ ಹುತ್ತರಿ ಆಚರಣೆ ನಡೆಯಿತು. ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ನಂತರ ಭತ್ತದ ಮಡಿಗಳಿಗೆ ಕೆರೆ, ಕಟ್ಟೆ, ನದಿಯಿಂದ ನೀರು ಹರಿಸಿ ಈ ಬಾರಿಯ ಭತ್ತದ ಕಟಾವಿಗೆ ರೈತಾಪಿ ವರ್ಗ ಕೈಹಾಕುತ್ತಿದ್ದಂತೆ ಮತ್ತೆ ಮಳೆರಾಯ ವರ್ಧಾ ಚಂಡಮಾರುತ ರೂಪದಲ್ಲಿ ಕೊಡಗಿನ ಮೇಲೆ ಮಳೆ ಸುರಿಸಿದ್ದಾನೆ. ದಕ್ಷಿಣ ಕೊಡಗಿನ ಹಲವೆಡೆ ಭತ್ತದ ಕೊಯ್ಲು ಹುತ್ತರಿಗೆ ಮುನ್ನವೇ ಅಲ್ಲಲ್ಲಿ ನಡೆದಿತ್ತು. ಕೊಯ್ಲು ಮಾಡಿ ಭತ್ತವನ್ನು ಮಡಿಗಳಲ್ಲಿಯೇ ಬಿಟ್ಟವರಿಗೆ ಅಕಾಲಿಕ ಮಳೆ ಬೇಸರ ತರಿಸಿದೆ. ಭತ್ತ ಮೊಳಕೆ ಒಡೆದರೆ ನಿಷ್ಪ್ರಯೋಜಕ. ರೈತರಿಗೂ ನಷ್ಟ. ಗೋಣಿಕೊಪ್ಪಲೂ ಒಳಗೊಂಡಂತೆ ವೀರಾಜಪೇಟೆ ತಾಲೂಕಿನ ಹಲವೆಡೆ ಈವರೆಗೆ 2 ಇಂಚಿಗೂ ಅಧಿಕ ವಾರ್ಧಾ ಮಳೆ ದಾಖಲಾದ ವರದಿಯಾಗಿದೆ. ಭತ್ತ ಕಟಾವಿಗೆ ಬಂದ ಹಿನ್ನೆಲೆ ಇದೀಗ ಮಳೆಯ ಅಗತ್ಯವಿಲ್ಲ. ಅರೇಬಿಕಾ ಮತ್ತು ರೋಬಸ್ಟಾ ಕಾಫಿ ಕೊಯ್ಲಿಗೆ ಬಂದ ಹಿನ್ನೆಲೆ ಈಗ ಮಳೆಯಾದಲ್ಲಿ ಕಾಫಿ ಹಣ್ಣಿನೊಂದಿಗೆ ಹೊಸಾ ಹೂವು ಮೂಡುವದರಿಂದಾಗಿ ಕಾಫಿ ಕೊಯ್ಲಿಗೂ ಹಿನ್ನಡೆ ಉಂಟಾಗಿದೆ. ಬಿಸಿಲ ಧಗೆಯನ್ನು ತಣಿಸಲು ಮಳೆ ಅಗತ್ಯವಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಒಳಗೊಂಡಂತೆ ಹಲವು ಅರಣ್ಯ ಪ್ರದೇಶದ ಮೇಲೆ ಮಳೆಯಾದ ಹಿನ್ನೆಲೆ ಹೊಸ ಚಿಗುರು ಮೂಡಲು, ಹುಲ್ಲು ಮೊಳೆಯಲು ಆ ಮೂಲಕ ಜಿಂಕೆ ಒಳಗೊಂಡಂತೆ ಸಸ್ಯಾಹಾರಿ ಪ್ರಾಣಿಗಳಿಗೆ ತಂಪನ್ನೆರೆದಿದೆ.

ಕೊಡಗಿನ ಬಹುತೇಕ ಕೃಷಿ ಪದ್ಧತಿ ಮಳೆಯಾಶ್ರಿತವಾಗಿರುವ ಹಿನ್ನೆಲೆ ಇಲ್ಲಿನ ರೈತರು ಹಲವು ಏಳೂ ಬೀಳುಗಳನ್ನು ಅನುಭವಿಸುತ್ತಲೇ ಇದ್ದಾರೆ. ಅಂತೂ ಇಂತೂ ಈ ಬಾರಿ ಹುತ್ತರಿ ಹಬ್ಬವನ್ನು ಮಳೆಯಲ್ಲಿಯೇ ಅಧಿಕವಾಗಿ ಆಚರಿಸಲಾಗಿರುವ ಚಿತ್ರಣ ಅಲ್ಲಲ್ಲಿ ಕಂಡು ಬಂದಿತು. ಗೋಣಿಕೊಪ್ಪಲು ಶ್ರೀಉಮಾ ಮಹೇಶ್ವರಿ ದೇವಾಲಯ ಆಶ್ರಯದಲ್ಲಿ ಇಲ್ಲಿನ ಪಾಲಿಬೆಟ್ಟ ರಸ್ತೆಯ ಸಮೀಪದ ಮೇಜರ್ ಬೋಪಣ್ಣ ಅವರ ಗದ್ದೆಯಲ್ಲಿ ಹುತ್ತರಿ ದಿನ ರಾತ್ರಿ 8 ಗಂಟೆ ಸುಮಾರಿಗೆ ಕದಿರು ತೆಗೆಯಲಾಯಿತು. ಸುಮಾರು 500ಕ್ಕೂ ಅಧಿಕ ಭಕ್ತಾದಿಗಳು ಮಳೆಯಲ್ಲಿಯೇ ಸಾರ್ವಜನಿಕವಾಗಿ ಕದಿರನ್ನು ತಮ್ಮ ತಮ್ಮ ಮನೆಗೆ ಕೊಂಡೊಯ್ದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚೆಪ್ಪುಡಿರ ತಮ್ಮು ದೇವಯ್ಯ, ಕೊಪ್ಪಿರ ಸನ್ನಿಸೋಮಯ್ಯ, ಜೆಪ್ಪೆಕೋಡಿ ರಾಜಾ, ಶೋಬಿತ್, ಕಾಡ್ಯಮಾಡ ಚೇತನ್, ಧ್ಯಾನ್ ಸುಬ್ಬಯ್ಯ ಮುಂತಾದವರ ನೇತೃತ್ವದಲ್ಲಿ ಹುತ್ತರಿ ಸಂಭ್ರಮಾಚರಣೆ ಕಂಡು ಬಂತು.

ಗೋಣಿಕೊಪ್ಪಲು ಇಗ್ಗುತಪ್ಪ ಕೊಡವ ಸಂಘದ ಆಶ್ರಯದಲ್ಲಿಯೂ ಅದ್ಧೂರಿ ಹುತ್ತರಿ ಆಚರಣೆ ನಡೆದಿದೆ. ಇಲ್ಲಿನ ಪರಿಮಳ ಮಂಗಳ ವಿಹಾರ ಹಿಂಭಾಗ ಮನೆಯಪಂಡ ಬ್ರಿಗೇಡಿಯರ್ ದೇವಯ್ಯ ಅವರ ಗದ್ದೆಯಲ್ಲಿ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ಕಾರ್ಯದರ್ಶಿ ಅಜ್ಜಿಕುಟ್ಟೀರ ದೇವಯ್ಯ, ಮಾಜಿ ಅಧ್ಯಕ್ಷರಾದ ಪೆÇನ್ನಿಮಾಡ ಸುರೇಶ್, ಸಿ.ಡಿ.ಮಾದಪ್ಪ ಒಳ ಗೊಂಡಂತೆ ಸುಮಾರು 200 ಕ್ಕೂ ಅಧಿಕ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಪಾಲಿಬೆಟ್ಟದಲ್ಲಿ ಅದ್ಧೂರಿ ಆಚರಣೆ

ಅಮ್ಮತ್ತಿ ಕ್ಷೇತ್ರದ ಜಿ.ಪಂ.ಸದಸ್ಯ ಪಾಲಿಬೆಟ್ಟದ ಮೂಕೋಂಡ ವಿಜು ಸುಬ್ರಮಣಿ ಅವರು ಅವಿವಾಹಿತ ರಾಗಿದ್ದು, ತಮ್ಮ ನಿವಾಸದಲ್ಲಿ ಸಾರ್ವಜನಿಕವಾಗಿ ಕದಿರು ತೆಗೆಯುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಳೆಯ ನಡುವೆಯೇ ರಾತ್ರಿ 8.05 ಗಂಟೆಗೆ ಕದಿರು ತೆಗೆದರು. ಆಪ್ತರು, ಕಾರ್ಮಿಕರು, ಹಿತೈಷಿಗಳೊಂದಿಗೆ ಹುತ್ತರಿ ಸಂಭ್ರಮಾಚರಣೆ ಮಾಡಿದರು. ಬಂದ ಅತಿಥಿಗಳಿಗೆ ಹುತ್ತರಿ ಗೆಣಸು, ಸಿಹಿಗೆಣಸು ಹಾಗೂ ಕಾಫಿಯನ್ನು ಮೊದಲಿಗೆ ವಿತರಣೆ ಮಾಡಲಾಯಿತು. ಕದಿರು ತೆಗೆದ ನಂತರ ಮೊದಲಿಗೆ ಭತ್ತದ ಕಣಕ್ಕೆ ಕದಿರನ್ನು ಹಾಕಿ ನಮಿಸಲಾಯಿತು. ನಂತರ ಮನೆಯ ನೆಲ್ಲಕ್ಕಿ ನಡುಬಾಡೆಗೆ ಬಂದು ಅರಳಿ ಎಲೆ ಹಾಗೂ ಮಾವಿನ ಎಲೆಯೊಂದಿಗೆ ಭತ್ತದ ತೆನೆಯನ್ನು ತೂಕ್‍ಬೊಳಕ್, ಮನೆಯ ಮುಂಭಾಗ, ಕಾಫಿ ಗಿಡ, ವಾಹನಗಳಿಗೂ ಕದಿರನ್ನು ಕಟ್ಟಲಾಯಿತು. ಕಳೆದ 10 ವರ್ಷದಿಂದ ಸ್ನೇಹಿತರು ಹಾಗೂ ಸಾರ್ವಜನಿಕ ರೊಂದಿಗೆ ಸೇರಿ ಹುತ್ತರಿ ಆಚರಣೆ ಮಾಡುತ್ತಿದ್ದು, ಕಳೆದ ವರ್ಷ ಒಟ್ಟು 3 ಎಕರೆಯಲ್ಲಿ ಬೆಳೆದ ಭತ್ತ ಹಾಗೂ ಹುಲ್ಲನ್ನು ಮಾರಿ ಸುಮಾರು ರೂ.35 ಸಾವಿರ ಲಾಭ ಗಳಿಸಿರುವದಾಗಿ ಹೇಳಿದರು. ರಾತ್ರಿ 9 ಗಂಟೆ ಸುಮಾರಿಗೆ ಎಲ್ಲರಿಗೂ ಸಾಮೂಹಿಕ ಔತಣ ಕೂಟವನ್ನು ಏರ್ಪಡಿಸಿದ್ದರು. ಮಳೆಯ ನಡುವೆಯೇ ಕಾರ್ಮಿಕರು ಹಾಗೂ ಆಪ್ತರು ಬಾಣ- ಬಿರುಸು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇಲ್ಲಿಗೆ ಸಮೀಪ ಪಡಿಕಲ್ ಕುಟುಂಬದ ಮಹಿಳೆಯರು, ಪುರುಷರು, ಮಕ್ಕಳು ರಾತ್ರಿ 8 ಗಂಟೆ ಸುಮಾರಿಗೆ ಕುಟುಂಬಸ್ಥರ ಗದ್ದೆಯಲ್ಲಿ ಕದಿರು ತೆಗೆದು ಹುತ್ತರಿ ಆಚರಣೆ ಮಾಡಿದರು. ಅಲ್ಲಿನ ಗೊಟ್ಟಡದ ಬಾಲಕೃಷ್ಣ ಅವರ ಮನೆಯಲ್ಲಿಯೂ ಕದಿರು ತೆಗೆಯುವ ಕಾರ್ಯಕ್ರಮದಲ್ಲಿ ನೂರಾರು ಗ್ರಾಮಸ್ಥರು ಭಾಗಿಯಾಗಿದ್ದರು.

ಚಿಕ್ಕಮಂಡೂರು ಗ್ರಾಮದಲ್ಲಿ ಕಳ್ಳಿಚಂಡ, ಮುಂಡುಮಾಡ, ಅಜ್ಜಿಕುಟ್ಟೀರ ಹಾಗೂ ಮಲಚೀರ ಕುಟುಂಬಸ್ಥರು ಸಾಮೂಹಿಕವಾಗಿ ಕದಿರು ತೆಗೆದರೆ, ಬಲ್ಯಮುಂಡೂರುವಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಅಯ್ಯಪ್ಪ ದೇವಸ್ಥಾನ, ಹರಿಹರ ಸುಬ್ರಮಣ್ಯ ದೇವಸ್ಥಾನ, ಚಿಕಮಂಡೂರುವಿನ ಭಗವತಿ ದೇವಸ್ಥಾನದಲ್ಲಿಯೂ ಗ್ರಾಮದ ಎಲ್ಲ ಜನಾಂಗಗಳೂ ಒಗ್ಗೂಡಿ ಸಾಮೂಹಿಕ ವಾಗಿ ಹುತ್ತರಿ ಆಚರಿಸಿದರು. ಮಳೆಯ ಹಿನ್ನೆಲೆ ಎಲ್ಲೆಡೆಯೂ ಕೊಡೆಯ ಸಹಾಯದೊಂದಿಗೆ ಭೂಮಿತಾಯಿಗೆ, ಭತ್ತದ ಪೈರಿಗೆ ಪೂಜೆ ನೆರವೇರಿಸಿದ್ದು ಕಂಡುಬಂತು.

ಒಟ್ಟಿನಲ್ಲಿ ಕಳೆದ ಹಲವು ವರ್ಷಗಳ ನಂತರ ಹುತ್ತರಿ ಹಬ್ಬವನ್ನು ಮಳೆಯೊಂದಿಗೆ ಆಚರಿಸಿದ ವಿಭಿನ್ನ ಕ್ಷಣ ಈ ಬಾರಿ ಪುನರಾವರ್ತನೆಯಾಯಿತು.

-ವರದಿ: ಟಿ.ಎಲ್.ಶ್ರೀನಿವಾಸ್