ಆಲೂರು-ಸಿದ್ದಾಪುರ, ಜು. 23: ಪ್ರತಿಯೊಬ್ಬ ನಾಗರಿಕ ಸ್ವಚ್ಛತೆ, ಪರಿಸರ, ನೈರ್ಮಲ್ಯದ ಬಗ್ಗೆ ಅರಿವನ್ನು ಹೊಂದುವ ಅಗತ್ಯವಿದೆ ಎಂದು ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟರಮಣ ಗೌಡ ಅಭಿಪ್ರಾಯ ಪಟ್ಟರು. ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ವನ ಮಹೋತ್ಸವ-ಪರಿಸರ-ಸ್ವಚ್ಛತೆ ಹಾಗೂ ಗ್ರಾಮ ನೈರ್ಮಲ್ಯತೆ ಕುರಿತಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೈಹಿಕ ಶಿಕ್ಷಕ ನಾಗರಾಜೇಗೌಡ ಮಾತನಾಡಿ, ಪರಿಸರವನ್ನು ಉಳಿಸಿ-ಬೆಳೆಸುವದು ಪ್ರತಿಯೊಬ್ಬನ ಹಕ್ಕು. ಇಂದಿನ ಆಧುನಿಕತೆ ಚಿಂತನೆಯಲ್ಲಿ ಅರಣ್ಯ ನಾಶವಾಗಿ ಕಾಂಕ್ರಿಟ್‍ನ ನಾಡಾ ಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಡು ಬರಿದಾಗುತ್ತಿದೆ. ಇದರಿಂದ ಮಳೆಯಾಗದೆ ಕೃಷಿ ಸಂಪತ್ತು ಇಳಿ ಮುಖವಾಗುತ್ತಿದೆ. ಜಲಸಂಪನ್ಮೂಲ ಬರಿದಾಗುತ್ತಿದ್ದು, ವಾತಾವರಣದಲ್ಲಿ ಏರು ಪೇರಾಗುತ್ತಿದೆ. ಇದೊಂದು ಗಂಭೀರ ವಿಚಾರ ವಾಗಿರುವದರಿಂದ ಪ್ರತಿಯೊಬ್ಬರೂ ಪರಿಸರ-ನೈರ್ಮಲ್ಯದ ಬಗ್ಗೆ ಜಾಗೃತಿ ಗೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ‘ಬಯಲು ಶೌಚಾಲಯದಿಂದ ಮುಕ್ತ’ ಎಂಬ ವಿಚಾರದ ಬಗ್ಗೆ ಭಾಷಣ ಸ್ಪರ್ಧೆ, ಸ್ವಚ್ಛತೆ ಮತ್ತು ಪರಿಸರ ಇದರ ಬಗ್ಗೆ ಪ್ರಬಂಧ ಸ್ಪರ್ಧೆ ಮತ್ತು ಪರಿಸರ ಕುರಿತು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿವಿಧ ಉಪಯುಕ್ತ ಗಿಡಗಳನ್ನು ನೆಟ್ಟರು. ಈ ಸಂದರ್ಭ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಶಿಕ್ಷಕರಾದ ಪ್ರವೀಣ್ ಕಾಮತ್, ರಮೇಶ್ ಕುರಿಯನ್, ಸಿ.ಕೆ. ಮಮತ, ಎಸ್‍ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಹಾಜರಿದ್ದರು.

- ದಿನೇಶ್ ಮಾಲಂಬಿ