ಗೋಣಿಕೊಪ್ಪಲು, ಜು. 21: ಸ್ವಾತಂತ್ರ್ಯ ಪೂರ್ವದಿಂದಲೂ ನಾಗರ ಹೊಳೆ ಹಾಡಿಗಳಲ್ಲಿ ವಾಸವಿರುವ ಗಿರಿಜನರು ಗ್ರಾಮದ ಸಂಪರ್ಕಕ್ಕೆ ವಡ್ದರಮಾಡು ಕಟ್ಟೆ ಕಾಲು ಹಾದಿಯ ರಸ್ತೆಯನ್ನೇ ಬಳಸುತ್ತಾ ಬಂದಿದ್ದಾರೆ. ಆದರೆ, ಇತ್ತೀಚೆಗೆ ನಿಟ್ಟೂರು, ಮಲ್ಲಂಗೆರೆ, ವಡ್ಡರಮಾಡು, ಕೊಲ್ಲಿಹಾಡಿ, ದಾಳಿಂಬೆ ಹಾಡಿ, ಕಾರ್ಮಾಡು ಲಿಂಕ್ ರಸ್ತೆಯನ್ನು ಅಭಿವೃದ್ಧಿಪಡಿಸುವ ಕೆಲಸ ಜಿ.ಪಂ. ಇಂಜಿನಿಯರಿಂಗ್ ವಿಭಾಗದಿಂದ ನಡೆದಿದೆ. ಕಚ್ಚಾ ರಸ್ತೆಯೇನೋ ಇದೆ. ಆದರೆ, ರಸ್ತೆ ಡಾಮರೀಕರಣ ಸಮರ್ಪಕವಾಗಿ ಇಲ್ಲಿ ನಡೆದಿಲ್ಲ. ನಿಟ್ಟೂರು ಸುವರ್ಣ ಗ್ರಾಮ ಯೋಜನೆಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸದರಿ ರಸ್ತೆಯನ್ನೂ ಸೇರಿಸಲಾಗಿತ್ತು. ಆದರೆ, ಇತ್ತೀಚೆಗೆ ಹಾಕಿದ್ದ ಡಾಮರು ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ನಿಟ್ಟೂರು-ಕೊಲ್ಲಿಹಾಡಿಗೆ ಕಚ್ಚಾ ರಸ್ತೆ ಇದ್ದರೂ ಡಾಮರೀಕರಣ ಕಾರ್ಯ ಇನ್ನೂ ಆರಂಭವಾಗದೆ, ರಸ್ತೆ ಸಾರ್ವಜನಿಕ ಓಡಾಟಕ್ಕೂ ಉಪಯೋಗಕ್ಕೆ ಬಾರದೆ ಇದೀಗ ಸಣ್ಣ ಮಳೆಗೂ ಕೆಸರಿನ ಗದ್ದೆಯಂತಹಾ ವಾತಾವರಣ ನಿರ್ಮಾಣವಾಗಿದೆ. ದ್ವಿಚಕ್ರ, ಚತುಷ್ಚಕ್ರ ವಾಹನ ಹೋಗಲಿ ಪಾದಾಚಾರಿಗಳ ಓಡಾಟಕ್ಕೂ ಅಸಹನೀಯ ಪರಿಸ್ಥಿತಿ ನಿರ್ಮಾಣವಾಗಿದೆ.

ಇಷ್ಟೇ ಆಗಿದ್ದರೆ ಪರವಾಗಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗಿರಿಜನರು ಸದರಿ ರಸ್ತೆ ಮೇಲಿನ ಓಡಾಟವನ್ನು ಬಿಟ್ಟು ವಡ್ಡರಮಾಡು ಕಟ್ಟೆಯ ಏರಿಯ ಮೇಲೆ ನಿತ್ಯವೂ ನಡೆದು ಬರುತ್ತಿದ್ದರೆ. ಏರಿಯ ಮೇಲೆಯೂ ಅಲ್ಲಲ್ಲಿ ಮಳೆ ನೀರು ನಿಂತು ಜಾರುಬಂಡಿಯಂತಾಗಿದೆ. ಸ್ವಲ್ಪ ಅಜಾಗರೂಕತೆಯಾದರೂ ಕಾಲು ಜಾರಿ ವಡ್ಡರಮಾಡು ಕಟ್ಟೆಗೆ ಬೀಳುವ ಸ್ಥಿತಿ ಇದೆ. ಇದು ನಿನ್ನೆ-ಮೊನ್ನೆಯ ಸ್ಥಿತಿಯಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿನ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ಇಲ್ಲಿನ ರಸ್ತೆ ಸಂಪರ್ಕಕ್ಕೆ ಐಟಿಡಿಪಿ ಇಲಾಖೆ ಹಣ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ಎಷ್ಟು ಹಣ ಬಿಡುಗಡೆಯಾಗಿದೆ? ಎಷ್ಟು ಖರ್ಚು ಮಾಡಲಾಗಿದೆ? ಯಾರು ಗುತ್ತಿಗೆದಾರರು? ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖಾಧಿ ಕಾರಿಗಳೇ ಉತ್ತರಿಸಬೇಕಾಗಿದೆ. ರಸ್ತೆ ಕಾಮಗಾರಿ ನಿಧಾನಗತಿಗೆ ಕಾರಣ ಏನು? ಇತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.

ಇಲ್ಲಿನ ಮಲ್ಲಂಗೆರೆ ಹೊಸ ಪೈಸಾರಿ ನಿವಾಸಿಗಳಿಗೆ ಇನ್ನೂ ಹಕ್ಕುಪತ್ರ ಹಲವರಿಗೆ ಸಿಕ್ಕಿಲ್ಲ. ಸುಮಾರು ರೂ. 4.50 ಲಕ್ಷ ಮೊತ್ತದ ಕಾಮಗಾರಿ ನಡೆದಿದೆ ಎಂದು ಹೇಳಲಾಗುತ್ತಿದ್ದರೂ ಇಲ್ಲಿ ಕೆಲಸ ಕಣ್ಣಿಗೆ ಕಾಣುತ್ತಿಲ್ಲ. ಐಟಿಡಿಪಿ ಇಲಾಖೆ ಕಟ್ಟೆಹಾಡಿ ಒಳಭಾಗ ಸುಮಾರು ರೂ. 7.50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದು ರಸ್ತೆ ಗುಣಮಟ್ಟದಿಂದ ಕೂಡಿಲ್ಲ ಅನ್ನುವ ಆರೋಪ ವ್ಯಕ್ತವಾಗಿದೆ.

ಮುಖ್ಯವಾಗಿ ನಿಟ್ಟೂರು, ಕಾನೂರು, ಕೊಟ್ಟಗೇರಿ, ಕಾರ್ಮಾಡು ನಿವಾಸಿಗಳಿಗೆ ನಾಗರಹೊಳೆ ಮಾರ್ಗ ಹುಣಸೂರು, ಮೈಸೂರಿಗೆ ತೆರಳಲು ಇದೇ ಸಂಪರ್ಕ ರಸ್ತೆ ಹತ್ತಿರದ ಮಾರ್ಗವಾಗಿದೆ ಎನ್ನಲಾಗುತ್ತಿದೆ. ವಡ್ಡರಮಾಡು ಕಟ್ಟೆ ತಳಭಾಗದಲ್ಲಿ ಹಲವು ಕೃಷಿಕ ಕುಟುಂಬಗಳು, ಹರಿಜನ-ಗಿರಿಜನ ಕುಟುಂಬಗಳು ವಾಸವಿದ್ದು ಉದ್ಧೇಶಿತ ರಸ್ತೆ ಅವ್ಯವಸ್ಥೆಯಿಂದ ನಿರಂತರ ಬವಣೆ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡಲೇ ರಸ್ತೆ ಕಾಮಗಾರಿ ಯನ್ನು ಗುಣಮಟ್ಟ ದೊಂದಿಗೆ ಅಭಿವೃದ್ಧಿಪಡಿಸಲು ಒತ್ತಾಯಿಸಿದ್ದಾರೆ. ಈ ವಿಭಾಗದ ಗ್ರಾಮಸ್ಥರಾದ ತೀತಿರ ಜಯ ಹಾಗೂ ಮಾಜಿ ಗ್ರಾ.ಪಂ. ಅಧ್ಯಕ್ಷರೂ, ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಅವರು ನಿರ್ಲಕ್ಷ್ಯ ಮುಂದುವರಿದಲ್ಲಿ ಸದರಿ ರಸ್ತೆಯನ್ನು ಅವಲಂಬಿಸಿರುವ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ದಾಗಿ ತಿಳಿಸಿದ್ದಾರೆ.

ಇಷ್ಟಕ್ಕೂ ಸರ್ಕಾರ ಅಭಿವೃದ್ಧಿಪಡಿಸಬೇಕಾಗಿರುವದು 2-3 ಕಿ.ಮೀ. ರಸ್ತೆ ಮಾತ್ರ. ಈಗಾಗಲೇ ಉದ್ಧೇಶಿತ ರಸ್ತೆಗೆ ರೂ. 11 ಲಕ್ಷಕ್ಕೂ ಅಧಿಕ ಮೊತ್ತ ವ್ಯಯವಾಗಿದೆ. ಈ ಬಗ್ಗೆಯೂ ತನಿಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಟಿ.ಎಲ್. ಶ್ರೀನಿವಾಸ್