ಸೋಮವಾರಪೇಟೆ,ನ.14: ಐಗೂರು ಗ್ರಾಮದಲ್ಲಿ ವಕೀಲ ಪದ್ಮನಾಭ್ ಅವರ ಕಾರಿಗೆ ಬೆಂಕಿ ಹಾಕಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ವಕೀಲರು ಇಂದು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.

ವಕೀಲರ ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯಗಳು ಮುಂದೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು. ಒಂದು ವಾರದ ಒಳಗೆ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಎಚ್ಚರಿಸಿದರು. ವಕೀಲರುಗಳಾದ ಅಭಿಮನ್ಯುಕುಮಾರ್, ಬಿ.ಜೆ. ದೀಪಕ್, ವಿಠಲ್ ಗೌಡ, ಮನೋಹರ್, ಹೇಮಚಂದ್ರ, ಕೃಷ್ಣಕುಮಾರ್, ಗಣಪತಿ, ಮುತ್ತಣ್ಣ, ನವೀನ್ ಸೇರಿದಂತೆ ಇತರ ವಕೀಲರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.