ಮಡಿಕೇರಿ, ಡಿ. 8: ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಜಗನ್ನಾಥ್ ಜಾಧವ್ ಅವರು ಭ್ರಷ್ಟಾಚಾರ ದಳದ ಕಾರ್ಯಾ ಚರಣೆಯಲ್ಲಿ ಲಂಚ ಸ್ವೀಕಾರ ಸಂದರ್ಭ ಸಿಕ್ಕಿ ಬಿದ್ದಿದ್ದಾರೆ.ಮಡಿಕೇರಿಯ ಎಕ್ಸ್‍ಟೆನ್‍ಷನ್ ನಿವಾಸಿ, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಯತೀಶ್ ಎಂಬವರು ಅಧಿಕಾರಿ ಬಯಸಿದ ಲಂಚ ಮೊತ್ತದ ಪ್ರಥಮ ಕಂತಾಗಿ ರೂ.82,000 ಹಣವನ್ನು ನೀಡುತ್ತಿದ್ದಾಗ ನಿಗ್ರಹ ದಳದ ಅಧಿಕಾರಿಗಳು ಸ್ಥಳದಲ್ಲೇ ಅವರನ್ನು ಸೆರೆ ಹಿಡಿದಿದ್ದಾರೆ.ಮಡಿಕೇರಿ ಸುದರ್ಶನ ವೃತ್ತದ ಬಳಿಯಿರುವ ವಸತಿ ಗೃಹದಲ್ಲಿ ಲೋಕೋಪಯೋಗಿ ಹಿರಿಯ ಅಭಿಯಂತರ ಜಗನ್ನಾಥ್ ಜಾಧವ್ ಅವರು ಭಾರಿ ಖುಷಿಯಿಂದ ಎಲ್ಲಾ ನೂತನ ರೂ. 2000 ಮುಖ ಬೆಲೆಯ ಒಟ್ಟು ರೂ. 82,000ವನ್ನು ತಮ್ಮ ಲಂಚದ ಕೈಗಳಿಂದ ಪಡೆಯುತ್ತಿದ್ದಂತೆ ಬರಸಿಡಿಲಿನಂತೆ ಈ ಅಧಿಕಾರಿಗೆ ಆಘಾತ ಎದುರಾಗಿತ್ತು. ಬೆಳಿಗ್ಗೆ 8.45ರ ವೇಳೆಗೆ ನಡೆದ ಈ ಕಾರ್ಯಾ ಚರಣೆಯಲ್ಲಿ ಮೈಸೂರು ಎಸಿಬಿ ವಿಭಾಗದ ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಇನ್ಸ್‍ಪೆಕ್ಟರ್‍ಗಳಾದ ಗಂಗಾಧರ್, ಅನಿಲ್‍ಕುಮಾರ್, ವಿನಯ್ ಹಾಗೂ ಮಂಜು ಹಾಗೂ ಸಿಬ್ಬಂದಿಗಳಾದ ದಿನೇಶ್, ಕುಮಾರ್, ಆರಾಧ್ಯ ಇವರುಗಳು ಧಾಳಿ ನಡೆಸಿದಾಗ ತಬ್ಬಿಬ್ಬಾದ ಅಧಿಕಾರಿ ನೇರವಾಗಿ ಬಲೆಗೆ ಬಿದ್ದರು. ಗುತ್ತಿಗೆ ಕೆಲಸವೊಂದಕ್ಕೆ ಗುತ್ತಿಗೆದಾರ ಯತೀಶ್ ಅವರಿಂದ ಇಇ ಜಾಧವ್ ಒಟ್ಟು ರೂ. 4 ಲಕ್ಷ ಲಂಚ ಬಯಸಿದ್ದರು. ಆದರೆ ‘ಪ್ರಥಮ ಚುಂಬನಂ ದಂತ ಭಗ್ನಂ’ ಎಂಬಂತೆ ಲಂಚದ ಪ್ರಥಮ ಕಂತನ್ನು

(ಮೊದಲ ಪುಟದಿಂದ) ಸ್ವೀಕರಿಸುವಾಗಲೇ ಕಾನೂನಿನ ತೆಕ್ಕೆಗೆ ಸಿಲುಕಿದ್ದಾರೆ.

ಗುತ್ತಿಗೆದಾರ ಯತೀಶ್ ಅವರು ಟೆಂಡರ್ ಮೂಲಕ ರೂ. 23 ಲಕ್ಷ ವೆಚ್ಚದ ವಸತಿ ನಿರ್ಮಾಣ ಕಾಮಗಾರಿಯನ್ನು ಅಧಿಕೃತವಾಗಿಯೇ ಗುತ್ತಿಗೆ ಪಡೆದಿದ್ದರು. ಇಲ್ಲಿನ ವಾರ್ತಾಭವನ ಬಳಿ ನಿರ್ಮಾಣ ಕಾರ್ಯವು ಪ್ರಗತಿಯಿಂದ ಸಾಗುತ್ತಿದ್ದು, ಪೂರಕವಾಗಿ ಪ್ರಾರಂಭಿಕ ಬಿಲ್ ಪಾವತಿಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗನ್ನಾಥ್ ಜಾಧವ್ ಅವರಲ್ಲಿ ಮನವಿ ಮಾಡಿದ್ದರು. ಆದರೆ ಬಿಲ್ ಪಾವತಿಸಬೇಕಾದರೆ, ಗುತ್ತಿಗೆದಾರ ಯತೀಶ್ ಅವರಿಗೆ ಜಾಧವ್ ರೂ. 4ಲಕ್ಷ ಲಂಚದ ಬೇಡಿಕೆ ಮುಂದಿಟ್ಟರು. ‘ಲಂಚ ಕೊಡಿ ನಿಮ್ಮ ಹಣ ಪಡೆಯಿರಿ’ ಎಂಬ ನಿರ್ಬಂಧ ಒಡ್ಡಿದ್ದರು. ಇದರಿಂದ ವಿಚಲಿತರಾದ ಯತೀಶ್ ಅವರು ಅನಿವಾರ್ಯವಾಗಿ ಎಸಿಬಿ ಮೊರೆ ಹೊಕ್ಕರು.

ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಪೂರ್ವಸಿದ್ಧತೆಗಳೊಂದಿಗೆ ಅಧಿಕಾರಿಯನ್ನು ಸ್ಥಳದಲ್ಲೇ ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ವಿವರಿಸಿದರು.

ಈ ಕಾರ್ಯಾಚರಣೆಯ ಪ್ರಮುಖ ನೇತೃತ್ವವನ್ನು ಮೈಸೂರು ಎಸಿಬಿಯ ಎಸ್‍ಪಿ ಕವಿತಾ ಅವರು ವಹಿಸಿದ್ದು, ಅವರ ಸೂಕ್ತ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ಬಳಿಕ ಕವಿತಾ ಅವರು ಮೈಸೂರಿನಿಂದ ಮಡಿಕೇರಿಗೆ ಆಗಮಿಸಿದ್ದು, ಮುಂದಿನ ಕ್ರಮದ ಬಗ್ಗೆ ನಿರ್ಧಾರ ಪ್ರಕಟಿಸಿದರು.‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಆರೋಪಿ ಇಂಜಿನಿಯರ್ ಜಗನ್ನಾಥ್ ಜಾಧವ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮೈಸೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವದು ಎಂದು ಮಾಹಿತಿಯಿತ್ತರು. ಬಳಿಕ ಈ ಪ್ರಕರಣವನ್ನು ಮಡಿಕೇರಿ ಎಸಿಬಿ ವಿಭಾಗಕ್ಕೆ ಹಸ್ತಾಂತರಿಸಲಾಗುತ್ತದೆ. ಮಡಿಕೇರಿ ಎಸಿಬಿ ವಿಭಾಗದ ಡಿವೈಎಸ್‍ಪಿ ಶಾಂತಮಲ್ಲಪ್ಪ ಅವರು ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಾರೆ ಎಂದು ಎಸ್‍ಪಿ ಕವಿತ ಮಾಹಿತಿಯಿತ್ತರು.