ಸುಂಟಿಕೊಪ್ಪ, ನ. 5: ರಾಜಕೀಯ ಭವಿಷ್ಯ ಹೇಳಲು ಸೋಮವಾರಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಭವಿಷ್ಯ ಹೇಳುವವರೆ ಎಂದು ಮಡಿಕೇರಿ ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಪಟ್ಟೆಮನೆ ಕೆ. ಶೇಷಪ್ಪ ವ್ಯಂಗ್ಯವಾಡಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸೋಲನ್ನು ಅನುಭವಿಸುತ್ತಾರೆ ಎಂದು ಪತ್ರಿಕಾ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಿರುಗೇಟು ನೀಡಿರುವ ಅವರು ಕೇವಲ ಹೋಬಳಿ ಮಟ್ಟಕ್ಕೆ ಸೀಮಿತವಾಗಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪತ್ರಿಕಾ ಹುಲಿಯಾಗುವದು ಬೇಡ.
ಶಾಸಕ ರಂಜನ್ ಹಾಗೂ ಬೋಪಯ್ಯ ಅವರ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಶ್ರೀರಕ್ಷೆಯಾಗಿದೆ. ಆದರೆ ತನ್ನ ಸ್ವ ಗ್ರಾಮದಲ್ಲೇ ಆಡಳಿತವನ್ನು ಉಳಿಸಿಕೊಳ್ಳಲಾಗದ ಲೋಕೇಶ್‍ಗೆ ಅನ್ಯಪಕ್ಷದವರನ್ನು ಟೀಕಿಸುವ ಯಾವ ನೈತಿಕತೆಯು ಇಲ್ಲ. ಕೊಡಗು ಬಿಜೆಪಿಯ ಭದ್ರಕೋಟೆ ಎಂಬದನ್ನು ತಾಲೂಕು, ಜಿ.ಪಂ. ಚುನಾವಣೆಯಲ್ಲಿ ತಿಳಿದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಧಾನ ಪರಿಷತ್‍ಗೆ ಆಯ್ಕೆಯಾದ ಎಂ.ಪಿ. ಸುನಿಲ್ ಸುಬ್ರಮಣಿ ಗೆಲುವು ಸಾಬೀತು ಪಡಿಸಿದೆ ಎಂದರು.
ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಿಸಿದರೆ ಕಾಂಗ್ರೆಸ್ ನಿರ್ನಾಮವಾಗಲಿದ್ದು, ಸಿ.ಎಂ. ಸಿದ್ಧರಾಮಯ್ಯ ತಲೆದಂಡ ತೆರಬೇಕಾಗುತ್ತದೆ ಎಂದು ಪಿ.ಕೆ. ಶೇಷಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.