ಶ್ರೀಮಂಗಲ, ಜು. 29: ಲೋಕಸಭಾ ಅಧಿವೇಶನದಲ್ಲಿ ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಪ್ರಸ್ತಾಪಿಸಿರುವದನ್ನು ಜಿಲ್ಲಾ ಬೆಳೆಗಾರರ ಒಕ್ಕೂಟ ಸ್ವಾಗತಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಹೇಳಿದರು. ಪೊನ್ನಂಪೇಟೆಯಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬೆಳೆಗಾರರ ಒಕ್ಕೂಟದಿಂದ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ನವದೆಹಲಿಗೆ ತೆರಳಿ ಕೇಂದ್ರ ಹಣಕಾಸು ಸಚಿವ, ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಕಾಫಿ ಬೆಳೆಗಾರರ ಸಮಸ್ಯೆ ಹಾಗೂ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಲು ಮನವಿ ಸಲ್ಲಿಸಲಾಗಿತ್ತು. ಇದೇ ಸಂದರ್ಭ ಕಾನೂನು ಸಚಿವರಾಗಿದ್ದ ಸದಾನಂದ ಗೌಡ, ಸಂಸದರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರಿಗೂ ಕಾಫಿ ಬೆಳೆಗಾರರ ಸಮಸ್ಯೆ ಮನವರಿಕೆ ಮಾಡಿ ಸರಕಾರದ ಗಮನ ಸೆಳೆಯಲು ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಾಣಿಜ್ಯ ಸಚಿವಾಲಯ ಕೇಳಿದ ವಿವಿಧ ದಾಖಲೆಗಳನ್ನೂ ಸಹ ಒದಗಿಸಲಾಗಿತ್ತು. ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಒಕ್ಕೂಟ ನಿರತರ ಸಂಪರ್ಕದಲ್ಲಿದೆ. ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುವ ಭರವಸೆ ನೀಡಿದ್ದರು ಎಂದು ಅವರು ತಿಳಿಸಿದರು.
ಉತ್ಪಾದನಾ ವೆಚ್ಚ ಹೆಚ್ಚಳ, ಹವಾಮಾನ ವೈಪರೀತ್ಯ, ದರ ಕುಸಿತ, ಫಸಲು ಕುಂಠಿತ, ಕಾರ್ಮಿಕರ ಸಮಸ್ಯೆ, ರಸ ಗೊಬ್ಬರ ದರ ಏರಿಕೆ ಇತ್ಯಾದಿ ಸಮಸ್ಯೆಗಳಿಂದ ಎರಡು ದಶಕಗಳಿಂದ ನಲುಗಿ ಹೋಗಿರುವ ಕಾಫಿ ಬೆಳೆಗಾರರ ನೆರವಿಗೆ ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕಾಫಿ ಬೆಳೆಗಾರರ ಎಲ್ಲಾ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಿ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸುವ ಬೇಡಿಕೆ ಈಡೇರಿಕೆಗಾಗಿ ಸಂಸದ ಪ್ರತಾಪ್ ಸಿಂಹ ಅವರು ಸರಕಾರದ ಮೇಲೆ ನಿರಂತರ ಒತ್ತಡ ಹೇರಿ ಅನುಷ್ಠಾನಕ್ಕೆ ತರುವ ಪ್ರಯತ್ನಕ್ಕೆ ಒಕ್ಕೂಟದಿಂದ ಸದಾ ಬೆಂಬಲ ನೀಡಲಾಗುವದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ನಿರ್ದೇಶಕ ಕೈಬುಲೀರ ಹರೀಶ್, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಹಾಜರಿದ್ದರು.