ಮಡಿಕೇರಿ, ಜ. 15: ಭಾರತೀಯ ಭೂಸೇನೆಯ ಉನ್ನತ ಹುದ್ದೆಯಾದ ಲೆಫ್ಟಿನೆಂಟ್ ಜನರಲ್ ಸ್ಥಾನಕ್ಕೆ ಕೊಡಗಿನವರಾದ ಪಟ್ಟಚೆರವಂಡ ಸಿ. ತಿಮ್ಮಯ್ಯ ಅವರು ಬಡ್ತಿ ಹೊಂದಿದ್ದಾರೆ. ಈ ಮೂಲಕ ಸೇನಾ ಜಿಲ್ಲೆಯೆಂದು ಖ್ಯಾತಿ ಪಡೆದಿರುವ 7ನೇ ವ್ಯಕ್ತಿಯೊಬ್ಬರು ಲೆಫ್ಟಿನೆಂಟ್ ಜನರಲ್ ಹುದ್ದೆ ಅಲಂಕರಿಸಿದಂತಾಗಿದೆ.ಈ ಹಿಂದೆ ಲೆಫ್ಟಿನೆಂಟ್ ಜನರಲ್ಗಳಾಗಿ ಅಪ್ಪಾರಂಡ ಅಯ್ಯಪ್ಪ, ಕೋದಂಡ ಸೋಮಣ್ಣ, ಬಿದ್ದಂಡ ಸಿ. ನಂದ, ಬುಟ್ಟಿಯಂಡ ಕೆ. ಬೋಪಣ್ಣ, ಬಲ್ಲಚಂಡ ಚಂಗಪ್ಪ, ಬಿಳಿಗೇರಿ ನಾರಾಯಣ ಭಟ್, ಮಹಾವೀರ ಪ್ರಸಾದ್ ಅವರುಗಳು ಕಾರ್ಯನಿರ್ವಹಿಸಿದ್ದಾರೆ. ಇದೀಗ ಮೇ. ಜನರಲ್ ಸ್ಥಾನದಿಂದ ಪಟ್ಟಚೆರವಂಡ ತಿಮ್ಮಯ್ಯ ಅವರು ಈ ಹುದ್ದೆಗೇರಿದ್ದಾರೆ. ಇವರು ಪಟ್ಟಚೆರುವಂಡ ಪೊನ್ನಪ್ಪ ಚಂಗಪ್ಪ ಹಾಗೂ ಗೌರು ಚಂಗಪ್ಪರ ಪುತ್ರರಾಗಿದ್ದು, ಭುವನೇಶ್ವರ ಸೈನಿಕ ಶಾಲೆಯಲ್ಲಿ ಓದಿದರು. ಖಡಕ್ ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಇಂಡಿಯನ್ ಮಿಲಿಟರಿ ಆಕಾಡೆಮಿ ಡೆಹ್ರಾಡೂನ್ನಿಂದ “ ಖಡ್ಗ ಗೌರವ” ದೊಂದಿಗೆ ಭಾರತೀಯ ಸೇನೆಯನ್ನು 1981 ರ ಜುಲೈ 31 ರಂದು ಸೇರಿದರು.
ಬಾಂಗ್ಲಾದೇಶದಲ್ಲಿ ಭಾರತೀಯ ಹೈಕಮಿಷನರ್ಗೆ ರಕ್ಷಣಾ ಸಲಹೆಗಾರರಾಗಿ ಕೆಲಸ ಮಾಡಿದ ತಿಮ್ಮಯ್ಯ ಪಶ್ಚಿಮ ಕಮಾಂಡ್ನ ಮುಖ್ಯಸ್ಥ ಹಾಗೂ ಪೂರ್ವ ಕಮಾಂಡಿನ ಮುಖ್ಯಸ್ಥರ ಪ್ರಶಂಸಾ ಪತ್ರಗಳಿಗೆ ಪಾತ್ರರಾಗಿದ್ದಾರೆ.
ಸೇನಾ ಮುಖ್ಯಸ್ಥರ ಎಡಿಸಿ, ಅಸ್ಸಾಂ ರೈಫಲ್ಸ್ನ ಮುಖ್ಯಸ್ಥರಾಗಿ, ಭಾರತೀಯ ಭೂಸೇನಾ ಕೇಂದ್ರ ಕಚೇರಿಯಲ್ಲಿ ಸಹಾಯಕ ಮಿಲಿಟರಿ ಕಾರ್ಯದರ್ಶಿಯಾಗಿ, ವಿಶ್ವ ಸಂಸ್ಥೆಯ ಕಾರ್ಯಪಾಲನಾ ಪಡೆಯಲ್ಲಿ ಅಂಗೋಲಾದಲ್ಲಿ ಮಿಲಿಟರಿ ವೀಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಇದೀಗ ಲೆಫ್ಟಿನೆಂಟ್ ಜನರಲ್ ಆಗಿ ಸೇನಾ ಮುಖ್ಯಸ್ಥರ ಕಚೇರಿಯಲ್ಲಿರುವ ದೂರು ಮತ್ತು ಸಲಹಾ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕರಾಗಿ ನಿಯುಕ್ತಿ ಗೊಂಡಿದ್ದಾರೆ.
ಪತ್ನಿ ನೀನಾ ಹಾಗೂ ಪುತ್ರರಾದ ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಆಗಿರುವ ಅರ್ಜುನ್ ತಿಮ್ಮಯ್ಯ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರದಲ್ಲಿ ಅಧ್ಯಯನ ನಿರತ ಅಕ್ಷಯ್ ತಿಮ್ಮಯ್ಯರನ್ನು ಹೊಂದಿದ್ದಾರೆ.
ಇಂದು ಸೇನಾದಿನ ಮಡಿಕೇರಿ ಯಲ್ಲಿ ನಿವೃತ್ತ ಸೈನಿಕನ ಜೀವನದ “ತಳಂಗ್ ನೀರ್” ಕೊಡವ ಸಿನಿಮಾ ತೆರೆಗೆ ಹಾಗೂ ಓರ್ವ ಕೊಡಗಿನ ಯೋಧ ಪದೋನ್ನತಿಗೊಂಡಿರುವುದು ಅದೂ ಪದ್ಮ ಭೂಷಣ, ಜನರಲ್ ತಿಮ್ಮಯ್ಯ ಅವರ ಹೆಸರಿನವರಾಗಿರು ವದು ಒಂದು ಯೋಗಾಯೋಗ ಎಂದೇ ಭಾವಿಸಬಹುದು.