ಮಡಿಕೇರಿ, ಸೆ. 18: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನಲ್ಲಿ ರೂ. 2.52 ಕೋಟಿ ವ್ಯಾಪಾರ ವಹಿವಾಟು ನಡೆಸಿ, ರೂ. 30.43 ಲಕ್ಷದಷ್ಟು ಲಾಭ ಗಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತೋರೆರ ಎಂ. ಅಯ್ಯಪ್ಪ, ಸಂಘ ವಾರ್ಷಿಕ ಒಟ್ಟು ರೂ. 66.01 ಕೋಟಿ ವಹಿವಾಟು ನಡೆಸಿದ್ದು, ರೂ. 6.70 ಲಕ್ಷದಷ್ಟು ವ್ಯಾಪಾರ ಲಾಭ ಗಳಿಸಿದೆ ಎಂದರು. ಪ್ರಸ್ತುತ 2015-16 ಸಾಲಿಗೆ ಶೇ. 12 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದ ಅವರು ಸಂಘದ ಸಾಧನೆ ಕುರಿತು ಮಾಹಿತಿ ನೀಡಿದರು.

ನಂ. 582ನೇ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು ಮತ್ತು ಮೇಕೇರಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ.

ಸಂಘದಲ್ಲಿ 1180 ಸದಸ್ಯರಿದ್ದು, ರೂ. 124.65 ಲಕ್ಷ ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ಪ್ರಸ್ತುತ ರೂ. 7.07 ಕೋಟಿ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಲಾಗಿದ್ದು, 2015-16ನೇ ಸಾಲಿಗೆ ಒಟ್ಟು ರೂ. 11.46 ಕೋಟಿ ಸಾಲವನ್ನು ನೀಡಲಾಗಿದೆ. ಈ ಪೈಕಿ ರೂ. 9.37 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ರೂ. 68.80 ಲಕ್ಷ ಮೊತ್ತದ ಮಧ್ಯಮಾವಧಿ ಸಾಲ, 26.94 ಲಕ್ಷದಷ್ಟು ಚಿನ್ನಾಭರಣ ಸಾಲ, ರೂ. 13.96 ಲಕ್ಷ ವಾಹನ ಸಾಲ, ರೂ. 18.50 ಲಕ್ಷ ಇತರೆ ಸಾಲ ಹಾಗೂ ರೂ. 37.95 ಲಕ್ಷ ಜಾಮೀನು ಸಾಲ ನೀಡಲಾಗಿದೆ. 2015-16ನೇ ಸಾಲಿಗೆ ಸಂಘ ಸದಸ್ಯರಿಗೆ ನೀಡಿದ ಸಾಲದಲ್ಲಿ ಶೇ. 99 ರಷ್ಟು ವಸೂಲಾತಿ ಮಾಡಲಾಗಿದೆ. ಸಂಘವು 57 ಸ್ವ ಸಹಾಯ ಸಂಘಗಳನ್ನು ನಿರ್ಮಾಣ ಮಾಡಿದ್ದು, ಪ್ರಸ್ತುತ ವರ್ಷ ರೂ. 38.40 ಲಕ್ಷದಷ್ಟು ಸಾಲ ನೀಡಲಾಗಿದೆ. ಅವುಗಳ ವಸೂಲಾತಿ ಶೇ. 97 ರಷ್ಟು ಆಗಿರುತ್ತದೆ. ಸಂಘವು ವರದಿ ಸಾಲಿಗೆ 1097 ಸದಸ್ಯರು ಯಶಸ್ವಿನಿ ಆರೋಗ್ಯ ವಿಮಾ ಕಾರ್ಡನ್ನು ಹೊಂದಿದ್ದು, ಕಳೆದ ಸಾಲಿನಲ್ಲಿ ನಮ್ಮ ಸಂಘದಿಂದ 8 ಜನ ಸದಸ್ಯರು ಒಟ್ಟು ರೂ. 4.55 ಲಕ್ಷದಷ್ಟು ಯಶಸ್ವಿನಿ ಆರೋಗ್ಯ ವಿಮಾ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ. ಸಂಘವು ಮೇಕೇರಿ ಗ್ರಾಮದಲ್ಲಿ ತನ್ನ ಶಾಖೆಯನ್ನು ಹೊಂದಿದ್ದು, ಇಲ್ಲಿ ಗೋದಾಮು ಮತ್ತು ಅಂಗಡಿ ಮಳಿಗೆ ನಿರ್ಮಾಣ ಮಾಡಿ ಬಾಡಿಗೆಗೆ ನೀಡಲಾಗಿದೆ ಎಂದು ಅಯ್ಯಪ್ಪ ಮಾಹಿತಿ ನೀಡಿದರು.

ಸಂಘದ ವಾರ್ಷಿಕ ಮಹಾಸಭೆ ತಾ. 22 ರಂದು ಪೂರ್ವಾಹ್ನ 10.30 ಗಂಟೆಗೆ ಸಂಘದ ಸಭಾಂಗಣ ದಲ್ಲಿ ನಡೆಯಲಿದ್ದು, ಸರ್ವ ಸದಸ್ಯರು ಪಾಲ್ಗೊಳ್ಳುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕುಟ್ಟಪ್ಪ, ನಿರ್ದೇಶಕರು ಗಳಾದ ಕಾವೇರಪ್ಪ, ಸಾಬು ತಿಮ್ಮಯ್ಯ, ಪಳಂಗಪ್ಪ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳಾದ ಸಂಜೀವ್ ಕುಮಾರ್ ಉಪಸ್ಥಿತರಿದ್ದರು.