ಮಡಿಕೇರಿ, ಸೆ. 21: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ಧೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಗರದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್‍ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ಮಾತನಾಡಿದ ಅಧ್ಯಕ್ಷರು, ಜಿ. ರಾಜೇಂದ್ರ ಅವರ ಆಸಕ್ತಿ ಹಾಗೂ ಇತರರ ಸಹಕಾರದಿಂದ ಆರಂಭಗೊಂಡ ಸಂಘವು ಇಂದು ಲಾಭದಲ್ಲಿದೆ ಎಂದರು. 2002 ರಂದು ಪ್ರಾರಂಭಗೊಂಡು ಸಂಘದಲ್ಲಿ ಒಟ್ಟು 1799 ಜನ ಸದಸ್ಯರಿರುತ್ತಾರೆ ಹಾಗೂ ಸದಸ್ಯರಿಂದ ಒಟ್ಟು ರೂ. 57,41.00 ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಘದಲ್ಲಿ ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್ ಡ್ರಾಫ್ಟ್ ಸಾಲ ಮತ್ತು ಸಿಬ್ಬಂದಿಗಳಿಗೆ ಆಸಾಮಿ ಸಾಲ ನೀಡಲಾಗುತ್ತಿದೆ. ತಾ. 31.3.2016ರ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ. 27,99,08,927 ಠೇವಣಾತಿ ಸಂಗ್ರಹಿಸಲಾಗಿದೆ ಹಾಗೂ 9,94,09,452 ವಿವಿಧ ಸಾಲ ನೀಡಲಾಗಿದೆ. ತಾ. 31.3.2016ರ ಅಂತ್ಯಕ್ಕೆ ಶೇಕಡ 92 ರಷ್ಟು ಸಾಲ ವಸೂಲಿ ಆಗಿರುತ್ತದೆ ಎಂದರು.

ತಾ. 31.3.2016ರ ಅಂತ್ಯಕ್ಕೆ ಸಂಘವು 38.28 ಲಕ್ಷ ಲಾಭ ಗಳಿಸಿರುತ್ತದೆ ಎಂದು ತಿಳಿಸಿದರು.

ಸಂಘದ ಸೋಮವಾರಪೇಟೆ ತಾಲೂಕಿನ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ 2007ನೇ ಡಿಸೆಂಬರ್ ತಿಂಗಳಲ್ಲಿ ಹೊಸ ಶಾಖೆಯನ್ನು ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ತೆರೆಯಲಾಗಿದೆ ಹಾಗೂ ಸಂಘದ ವ್ಯವಹಾರವು ಹೆಚ್ಚುತ್ತಿರುವದರಿಂದ ಮತ್ತು ವೀರಾಜಪೇಟೆ ತಾಲೂಕಿನ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ 2012 ರಲ್ಲಿ ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಸಂಘದ ಇನ್ನೊಂದು ಶಾಖೆಯನ್ನು ತೆರೆಯಲಾಗಿದೆ ಎಂದರು.

ಸಂಘದಲ್ಲಿ ಯಶಸ್ವಿನಿ ಯೋಜನೆಯನ್ನು ಪ್ರಾರಂಭಿಸ ಲಾಗಿದೆ ಹಾಗೂ ಸದಸ್ಯರಿಗೆ ಅನುಕೂಲವಾಗುವಂತೆ ಮರಣ ನಿಧಿಯನ್ನು ಪ್ರಾರಂಭಿಸಲಾಗಿದೆ.

ಉಪಾಧ್ಯಕ್ಷರಾದ ಜಿ.ಎ. ಉದಯ, ನಿರ್ದೇಶಕರಾದ ಬಾಬು ಚಂದ್ರ ಉಳ್ಳಾಗಡ್ಡಿ, ಗಿರೀಶ್ ಗಣಪತಿ, ಸವಿತಾ ರೈ, ಮುನೀರ್ ಅಹಮ್ಮದ್, ಕಾವೇರಪ್ಪ ಎಂ.ಪಿ., ಎ.ಆರ್. ಅಬ್ದುಲ್ ರಹೀಂ, ಜಗನ್ನಾಥ್ ಕೆ.ಪಿ., ರಾಮಕೃಷ್ಣಯ್ಯ, ಬಿ. ಯತೀಶ್ ಕುಮಾರ್ ಹೆಚ್.ಸಿ., ಬಿಜಾಯ್ ಜಿ., ಬಿ.ಎನ್. ಪ್ರಕಾಶ್ ಉಪಸ್ಥಿತರಿದ್ದರು. ವಂದನಾರ್ಪಣೆಯನ್ನು ಬಿ.ಎನ್. ಪ್ರಕಾಶ್ ಮಾಡಿದರು. ಪ್ರಾರ್ಥನೆ ಜಲಜಾ ಮತ್ತು ಶಾಂತಿ, ಸ್ವಾಗತ- ಕಾರ್ಯದರ್ಶಿ ಟಿ.ಡಿ. ಶ್ಯಾಮಲ ಅವರಿಂದ ನೆರವೇರಿತು.