ಶನಿವಾರಸಂತೆ, ಅ. 8: ಆಲೂರು-ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2015-16 ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಂಘ ಒಟ್ಟು ರೂ. 24.86 ಲಕ್ಷ ಲಾಭಗಳಿಸಿದ್ದು, ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು.

ಸಂಘದಲ್ಲಿ 2837 ಸದಸ್ಯರುಗಳಿದ್ದು, ಸದಸ್ಯರ ಪಾಲು ಹಣ ರೂ. 88.98 ಲಕ್ಷಗಳು ಎಲ್ಲಾ ಠೇವಣಾತಿಗಳು ಸೇರಿ ರೂ. 387.27 ಲಕ್ಷಗಳನ್ನು ಸಂಗ್ರಹಿಸಲಾಗಿದೆ. ಮಾರಾಟ ವಿಭಾಗದಿಂದ 31.03.2016 ರವರೆಗೆ ರೂ 1,27,40,098-66 ರಷ್ಟು ವ್ಯಾಪಾರ ವಹಿವಾಟು ನಡೆಸಿ ರೂ 4,79,391-26ಗಳು ವ್ಯಾಪಾರ ಲಾಭಗಳಿಸಿದೆ. 2016ನೇ ಸಾಲಿಗೆ ಸಂಘ 100 ರಷ್ಟು ಸಾಲವನ್ನು ಮರುಪಾವತಿ ಮಾಡಿದೆ. ಕೃಷಿ ಸಾಲ, ರಸಗೊಬ್ಬರ ಮತ್ತು ಆಭರಣ ಸಾಲವನ್ನೂ ನೀಡಿದೆ. ಸಂಘ ಅಭಿವೃದ್ಧಿಗೆ ಸಹಕಾರಿಗಳು ಸಹಕರಿಸಬೇಕು ಎಂದು ಅಧ್ಯಕ್ಷರು ಕೋರಿದರು.

ಸಹಕಾರ ಸಂಘದ ವ್ಯಾಪ್ತಿಯ ಹಳ್ಳಿಗಳು ಬರಗಾಲ ಪ್ರದೇಶವಾಗಿದೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ವ್ಯಾಪ್ತಿಯನ್ನು ಬರಗಾಲ ಪ್ರದೇಶ ಎಂದು ಘೋಷಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಂಘದ ಸದಸ್ಯ ಹೆಚ್.ಎಸ್. ಪ್ರೇಮ್‍ನಾಥ್ ಪ್ರಸ್ತಾಪಿಸಿದರು.

ಸಂಘಕ್ಕೆ ಬಂದಿರುವ ಲಾಭಾಂಶದಲ್ಲಿ ಶೇ. 25 ರಷ್ಟು ಡಿವಿಡೆಂಡ್ ಅನ್ನು ಸಂಘದ ಸದಸ್ಯರಿಗೆ ನೀಡಬೇಕೆಂದು ಹಿರಿಯ ಸದಸ್ಯ ಸಿ.ಕೆ. ಚಂದ್ರಶೇಖರ್ ಒತ್ತಾಯಿಸಿದರು. ಈ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದು ಶೇ. 10 ರಷ್ಟು ಡಿವಿಡೆಂಡ್ ಅನ್ನು ಕೊಡುವಂತೆ ತೀರ್ಮಾನಿಸ ಲಾಯಿತು. ಸದಸ್ಯರುಗಳಾದ ರಾಘವಯ್ಯ, ರುದ್ರಪ್ಪ, ಜಗದೀಶ್, ಜಯಮ್ಮ ಮುಂತಾದವರು ಉಪಸ್ಥಿತರಿದ್ದರು.