ಸಿದ್ದಾಪುರ, ಜ. 28: ಸರ್ಕಾರದಿಂದ ಜಿಲ್ಲಾಡಳಿತದ ಮುಖಾಂತರ ಶನಿವಾರದಂದು ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನವನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಆದರೆ ಜಿಲ್ಲಾಡಳಿತ ನಿರಾಶ್ರಿತರಿಗೆ ಕೈಗೊಂಡಿರುವ ನಿವೇಶನ ಹಂಚಿಕೆಯ ಪ್ರಕ್ರಿಯೆಗಳಿಗೆ ಆದಿವಾಸಿಗಳು ಅಸಮಾಧಾನಗೊಂಡು ನಿವೇಶನ ಹಂಚಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆ ಮತ್ತಷ್ಟು ಕಗ್ಗಂಟಾಗುವ ಸಾಧ್ಯತೆ ಇದೆ.ಕಳೆದ ಡಿ. 7ರಂದು ದಿಡ್ಡಳ್ಳಿ ಅರಣ್ಯ ಪ್ರದೇಶದೊಳಗೆ ಆದಿವಾಸಿಗಳು ನಿರ್ಮಾಣ ಮಾಡಿಕೊಂಡಿದ್ದ ಗುಡಿಸಲುಗಳನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ತೆರವು ಗೊಳಿಸಲಾಗಿತ್ತು. ತೆರವುಗೊಳಿಸಿದ 577 ಕುಟುಂಬಗಳು ಬಳಿಕ ದಿಡ್ಡಳ್ಳಿಯ ಆಶ್ರಮ ಶಾಲೆಯ ಎದುರು ತಾತ್ಕಾಲಿಕ ಗುಡಿಸಲು ನಿರ್ಮಾಣ ಮಾಡಿಕೊಂಡು ತಮ್ಮ ಮಕ್ಕಳೊಂದಿಗೆ ವಾಸ ಮಾಡಿಕೊಂಡು ಹೋರಾಟವನ್ನು ಪ್ರಾರಂಭಿಸಿದರು. ಹೋರಾಟ ಕಾವೇರುತ್ತಿದ್ದಂತೆ ಬೆಂಗಳೂರಿನ ವಸತಿ ವಂಚಿತ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಸೇರಿ ಹೋರಾಟ ಮಾಡುವ ಮೂಲಕ ಮಡಿಕೇರಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆದರೂ ಕೂಡ ದಿಡ್ಡಳ್ಳಿಯ ನಿವೇಶನ ಸಮಸ್ಯೆ ಬಗೆಹರಿಯಲಿಲ್ಲ.
ನಂತರ ದಿಡ್ಡಳ್ಳಿಯಲ್ಲೇ ಆದಿವಾಸಿಗಳು, ವಿವಿಧ ಸಂಘಟನೆಗಳ ಮುಖಾಂತರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ದಿಡ್ಡಳ್ಳಿಗೆ ಭೇಟಿ ನೀಡಿ ಬಳಿಕ ಮಡಿಕೇರಿಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆದಿವಾಸಿಗಳ ಮುಖಂಡರೊಂದಿಗೆ ಹಾಗೂ ವಸತಿ ವಂಚಿತ ಹೋರಾಟ ಸಮಿತಿಯ ಮುಖಂಡರೊಂದಿಗೆ ಸಭೆ ನಡೆಸಿ, ಡಿ.ಸಿ. ಕಚೇರಿಗೆ ರೂ. 1 ಕೋಟಿಯ ಚೆಕ್ ಅನ್ನು
(ಮೊದಲ ಪುಟದಿಂದ) ನೀಡಿ, ಒಂದು ತಿಂಗಳಿಗೆ ತಾತ್ಕಾಲಿಕ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು. ನಂತರ ಇತ್ತೀಚೆಗೆ ಕುಶಾಲನಗರಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಸೀತಾರಾಮ್ ಅವರು ಆದಿವಾಸಿಗಳ ಮುಖಂಡರ ಸಭೆ ಕರೆದು 3 ತಾಲೂಕುಗಳಲ್ಲಿ ನಿರಾಶ್ರಿತರಿಗೆ ನಿವೇಶನ ಒದಗಿಸಿ ಕೊಡಲಾಗುವದೆಂದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಪ್ರಮುಖರು ದಿಡ್ಡಳ್ಳಿಯ ಅರಣ್ಯ ಪ್ರದೇಶದಲ್ಲಿ ನಿವೇಶನ ನೀಡಲು ಯಾವದೇ ಕಾನೂನು ತೊಡಕು ಇಲ್ಲವೆಂದು ಹೇಳಿಕೆ ನೀಡಿದ್ದು, ಮುಂದಿನ 10 ದಿನಗಳಲ್ಲಿ ದಿಡ್ಡಳ್ಳಿಯಲ್ಲೇ ನಿವೇಶನ ನೀಡದಿದ್ದಲ್ಲಿ ದಿಡ್ಡಳ್ಳಿಯಿಂದಲೇ ಹೋರಾಟ ಪ್ರಾರಂಭಿಸಿ, ರಾಜ್ಯ ಮಟ್ಟದವರೆಗೂ ಮುಂದುವರಿಸಲಾಗುವದೆಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಶನಿವಾರದಂದು ದಿಡ್ಡಳ್ಳಿಯ ಆಶ್ರಮ ಶಾಲೆಯ ಆವರಣದೊಳಗೆ ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ನಿರಾಶ್ರಿತರಿಗೆ ನಿವೇಶನ ಹಂಚಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
528 ಸಕ್ರಮ
ದಿಡ್ಡಳ್ಳಿಯಲ್ಲಿ ಈಗಾಗಲೇ 611 ಕುಟುಂಬಗಳು ಗುಡಿಸಲಿನಲ್ಲಿ ವಾಸವಾಗಿದ್ದು, ಈ ಪೈಕಿ ಅವರುಗಳ ದಾಖಲೆಗಳನ್ನು ಪರಿಶೀಲಿಸಿದಾಗ ಕೆಲವು ಕುಟುಂಬಗಳು ಮನೆ ಹೊಂದಿದ್ದು, ಕೆಲವರಿಗೆ ಸರಿಯಾದ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಒಟ್ಟು 528 ಅರ್ಹ ಕುಟುಂಬಗಳನ್ನು ಗುರುತಿಸಲಾಗಿದೆ ಎಂದು ನಿವೇಶನ ಹಂಚಿಕೆಯ ಸಮಿತಿಯ ಅಧಿಕಾರಿಗಳು ತಿಳಿಸಿದರು. 528 ಅರ್ಹ ಕುಟುಂಬಗಳಿಗೆ ಅವರ ಹೆಸರುಗಳ ಚೀಟಿಗಳನ್ನು ಡಬ್ಬಿಯೊಂದರಲ್ಲಿ ಮಿಶ್ರಣಗೊಳಿಸಿ ಸಮಿತಿಯ ಅಧಿಕಾರಿಗಳು ಲಾಟರಿ ಎತ್ತುವ ಮೂಲಕ ಪ್ರಥಮ ಬಾರಿ ಕುಶಾಲನಗರ ಬಸವನಹಳ್ಳಿಯಲ್ಲಿ 181 ಮಂದಿಗೆ ಹಾಗೂ ಸೋಮವಾರಪೇಟೆ ತಾಲೂಕಿನ ರಾಮಪುರಂನಲ್ಲಿ 171 ಮಂದಿಗೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರುವಿನಲ್ಲಿ 176 ಮಂದಿಗೆ ಹೀಗೆ ಒಟ್ಟು 528 ಕುಟುಂಬಗಳಿಗೆ ನಿವೇಶನ ಹಂಚಿಕೆಯ ಮುಖಾಂತರ ಆಯ್ಕೆಗೊಳಿಸಲಾಯಿತು. ಆಯ್ಕೆಯ ನೇತೃತ್ವವನ್ನು ವಹಿಸಿದ್ದ ಜಿ.ಪಂ. ಯೋಜನಾಧಿಕಾರಿ ಸಿದ್ದಲಿಂಗಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟು 611 ನಿರಾಶ್ರಿತರ ಕುಟುಂಬಗಳ ಪೈಕಿ 528 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಅರ್ಹ ಕುಟುಂಬಗಳಿಗೆ 30x30 ನಿವೇಶನವನ್ನು ನೀಡಿ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಿ ಬಡಾವಣೆಯಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗುವದೆಂದರು. ಇಂದು ನಡೆದ ನಿವೇಶನ ಹಂಚಿಕೆಯ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಸರ್ಕಾರಕ್ಕೆ ಕಳಿಸಿಕೊಡಲಾಗುವದೆಂದರು. ನಿರಾಶ್ರಿತ ಕುಟುಂಬಗಳಿಗೆ ನಿವೇಶನ ನೀಡುವ ಬಗ್ಗೆ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಲಾಗಿದೆ. ಆದರೆ ಆಯ್ಕೆ ಪ್ರಕ್ರಿಯೆಗೆ ಯಾರೂ ಆಗಮಿಸಿರುವದಿಲ್ಲವೆಂದರು. ನಿರಾಶ್ರಿತರಿಗೆ ನಿವೇಶನ ಹಂಚಿಕೆಯ ಕಾರ್ಯಕ್ರಮದಲ್ಲಿ ಸಮಿತಿಯ ಅಧಿಕಾರಿಗಳಾದ ಜಿಲ್ಲಾ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ವೀರಾಜಪೇಟೆ ತಹಶೀಲ್ದಾರ್ ಮಹದೇವ ಸ್ವಾಮಿ, ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ಪ್ರಕಾಶ್, ತಾಲೂಕು ಕಲ್ಯಾಣಾಧಿಕಾರಿ ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಕಂದಾಯ ನಿರೀಕ್ಷಕ ಶ್ರೀನಿವಾಸ್, ಗ್ರಾಮಲೆಕ್ಕಿಗ ಮಂಜುನಾಥ್ ಮೊದಲಾದವರು ಹಾಜರಿದ್ದರು.
ಹಂಚಿಕೆ ಪ್ರಕ್ರಿಯೆಗೆ ನಕಾರ
ನಿವೇಶನ ಹಂಚಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ ಆದಿವಾಸಿ ಮುಖಂಡ ಜೇನುಕುರುಬರ ಅಪ್ಪಾಜಿ ಮಾತನಾಡಿ, ಜಿಲ್ಲಾಡಳಿತ ಲಾಟರಿ ಎತ್ತುವ ಮುಖಾಂತರ ಆದಿವಾಸಿ ನಿರಾಶ್ರಿತರ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಕ್ರಮ ಸಮಂಜಸವಾದದ್ದಲ್ಲ, ಜಿಲ್ಲಾಡಳಿತ ಗುರುತಿಸಿದ ಸ್ಥಳಕ್ಕೆ ಹೋಗಲು ಆದಿವಾಸಿಗಳು ಒಪ್ಪುವದಿಲ್ಲ ಎಂದ ಅವರು ದಿಡ್ಡಳ್ಳಿಯ ಅರಣ್ಯ ಪ್ರದೇಶದೊಳಗೆ ಪೈಸಾರಿ ಜಾಗವಿದ್ದು, ಕಾನೂನು ತೊಡಕು ಇಲ್ಲದಿದ್ದರೂ ಕೂಡ ಅನಗತ್ಯವಾಗಿ ಆದಿವಾಸಿಗಳಿಗೆ ತೊಂದರೆ ನೀಡುತ್ತಿರುವ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರುಗಳು ಈಗ ಗುರುತಿಸಿದ ಜಾಗವನ್ನು ಜಿಲ್ಲೆಯ ಇತರ ಆದಿವಾಸಿಗಳಿಗೆ ನೀಡಲಿ ಎಂದ ಅಪ್ಪಾಜಿ ಸದ್ಯದಲ್ಲೇ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರುಗಳನ್ನು ಭೇಟಿ ಮಾಡುವ ಮೂಲಕ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವದೆಂದರು. ದಿಡ್ಡಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದೊಳಗಿರುವ ಪೈಸಾರಿ ಜಾಗದಲ್ಲಿ ನಿವೇಶನ ನೀಡದಿದ್ದಲ್ಲಿ, ಹೋರಾಟ ಸಮಿತಿಯ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವದೆಂದು ಆಕ್ರೋಶ ವ್ಯಕ್ತಪಡಿಸಿದರು. ಆದಿವಾಸಿ ಮುಖಂಡೆ ಜೆ.ಕೆ. ಮುತ್ತಮ್ಮ ಮಾತನಾಡಿ, ಸಮಾಜ ಕಲ್ಯಾಣಾಧಿಕಾರಿ ಆಂಜನೇಯ ಅವರು ಭೇಟಿ ನೀಡಿ ನಿರಾಶ್ರಿತರಿಗೆ ತಾತ್ಕಾಲಿಕ ಮೂಲಭೂತ ಸೌಕರ್ಯ ಒದಗಿಸಿಕೊಡಲು ಸರ್ಕಾರದ ವತಿಯಿಂದ ರೂ. 1 ಕೋಟಿ ಅನುದಾನ ನೀಡಿದ್ದರೂ ಕೂಡ ಶುಕ್ರವಾರದಂದು ಸುರಿದ ಧಾರಾಕಾರ ಮಳೆಯ ಸಂದರ್ಭದಲ್ಲಿ ಗಾಳಿ - ಮಳೆಗೆ ಗುಡಿಸಲುಗಳ ಪ್ಲಾಸ್ಟಿಕ್ ಹೊದಿಕೆಗಳು ಕಿತ್ತು ಹೋದÀ ಸಂದರ್ಭ ಪ್ಲಾಸ್ಟಿಕ್ ಹೊದಿಕೆಗಳು ಹಾರಿ ಹೋಗಿ ರಾಶಿಬಿದ್ದರೂ, ಹೊದಿಕೆಗಳನ್ನು ನೀಡದೇ ಐಟಿಡಿಪಿ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ವಹಿಸಿ, ಕಡೆಗಣಿಸಿರುವದು ಖಂಡನೀಯವೆಂದರು.
ಆದಿವಾಸಿ ಮುಖಂಡ ಸ್ವಾಮಿ ಮಾತನಾಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಿರಾಶ್ರಿತರಿಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ನಿವೇಶನಗಳನ್ನು ಲಾಟರಿ ಎತ್ತುವ ಮೂಲಕ ನೀಡುತ್ತಿರುವದು ನಮಗೆ ಬೇಡ. ನಮಗೆ ದಿಡ್ಡಳ್ಳಿಯಲ್ಲೇ ನಿವೇಶನ ನೀಡದಿದ್ದಲ್ಲಿ ಎಲ್ಲರು ಅಧಿಕಾರಿಗಳ ಮುಂದೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.
ಮಡಿಕೇರಿ ವಿಭಾಗದ ಡಿವೈಎಸ್ಪಿ ಛಬ್ಬಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.