ಸೋಮವಾರಪೇಟೆ, ಡಿ. 29: ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಲಯನ್ಸ್ ಸಂಸ್ಥೆಗೆ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಫೆಬ್ರವರಿ 2017ರಿಂದ ದಡಾರ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಉಚಿತ ಲಸಿಕೆಯನ್ನು ನೀಡುವ ಮಹತ್ತರ ಕಾರ್ಯ ನಡೆಯಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಅರುಣ್‍ಶೆಟ್ಟಿ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಶತಮಾನೋತ್ಸವ ನೆನಪಿನಲ್ಲಿ ವಿಶ್ವದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದ್ದು, ಪರಿಸರ ಸಂರಕ್ಷಣೆ ಹಾಗೂ ಯುವ ಸಮೂಹಕ್ಕೆ ಉತ್ತೇಜನ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವದು. ದಕ್ಷಿಣ ಕನ್ನಡದ ಯಕ್ಷಗಾನ ಸೇರಿದಂತೆ ಜಾನಪದ ಕಲೆಗಳ ಬೆಳವಣಿಗೆ, ಕನ್ನಡ ಅಭಿವೃದ್ಧಿ, ಹಬ್ಬ ಹರಿದಿನಗಳನ್ನು ಸೇವಾ ಮನೋಭಾವನೆಯಿಂದ ಆಚರಿಸು ವಂತಹ ವಿನೂತನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಮಾಹಿತಿ ನೀಡಿದರು.

ಪುತ್ತೂರಿನ ಈಶ್ವರಮಂಗಲ ಪದವಿಪೂರ್ವ ಕಾಲೇಜಿಗೆ ಸುಮಾರು 35ಲಕ್ಷ ರೂ. ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವದು. ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ಯುವ ವಕೀಲರುಗಳಿಗೆ ಅನುಕೂಲ ಒದಗಿಸುವ ಉದ್ದೇಶ ದಿಂದ “ಈ-ಲೈಬ್ರರಿ’ಯನ್ನು ಪ್ರಾರಂಭಿಸಲಾಗುವದು. ಇದರಿಂದಾಗಿ ವಕೀಲರಿಗೆ ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ.

ಲಯನ್ಸ್ ಜಿಲ್ಲಾ ವ್ಯಾಪ್ತಿಗೆ ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಒಟ್ಟು 86 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ 2017ರ ಜುಲೈಯಲ್ಲಿ ಶತಮಾನೋತ್ಸವದ ಅಂಗವಾಗಿ ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ಭಾರತೀಯರಾದ ನರೇಶ್ ಅಗರ್‍ವಾಲ್ ಅಧ್ಯಕ್ಷ ರಾಗುತ್ತಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು.

ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್.ಮಹೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇದೇ ಪ್ರಪ್ರಥಮವಾಗಿ ಶವವನ್ನು ಸಂರಕ್ಷಿಸುವ ಉದ್ದೇಶದಿಂದ ನೂತನ ತಂತ್ರಜ್ಞಾನವನ್ನು ಒಳಗೊಂಡಿರುವ ಸಂಚಾರಿ ಶವಾಗಾರವನ್ನು ಮುಂದಿನ ಮಾರ್ಚ್ ತಿಂಗಳ ಒಳಗೆ ಆರಂಭಿಸಲಾಗುವದು ಎಂದರು.

ಲಯನ್ಸ್ ರಾಜ್ಯಪಾಲರ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಬೇಳೂರಿನ ವೃದ್ಧಾಶ್ರಮದಲ್ಲಿ ನೆಲೆಸಿರುವವರಿಗೆ ಉಚಿತ ವಸ್ತ್ರಗಳನ್ನು ವಿತರಿಸಲಾಗುವದು. ಬೇಳೂರು ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಪರಿಕರಗಳನ್ನು ಉಚಿತವಾಗಿ ನೀಡಲಾಗುವದು ಎಂದ ಅವರು, ಸೋಮವಾರಪೇಟೆ ಪಟ್ಟಣದ ವಿವೇಕಾನಂದ ವೃತ್ತದ ಸಮೀಪ ಹಲವು ಹಣ್ಣಿನ ವ್ಯಾಪಾರಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಬೃಹತ್ ಗಾತ್ರದ ಛತ್ರಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಸ್.ಬಿ. ಲೀಲಾರಾಮ್, ಕ್ಯಾಬಿನೆಟ್ ಸದಸ್ಯರಾದ ಕೆ.ಎಂ.ಜಗದೀಶ್, ಹಾಲೆಬೇಲೂರು ನಿರ್ವಾಣಿಶೆಟ್ಟಿ ಕಾರ್ಯದರ್ಶಿ ಮಂಜುನಾಥ್ ಚೌಟ ಉಪಸ್ಥಿತರಿದ್ದರು.