ಗೋಣಿಕೊಪ್ಪ, ಡಿ. 22: ವೀರಾಜಪೇಟೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕುಟ್ಟಂಡ ಸುಬ್ಬಯ್ಯ ಮೆಮೋರಿಯಲ್ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಹಾಕಿ ಫೈನಲ್ ಪಂದ್ಯಾಟದ ಹಣಾಹಣಿಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಲಯನ್ಸ್, ಕಳತ್ಮಾಡು ಮತ್ತು ಪ್ರಾಥಮಿಕ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಮಡಿಕೇರಿ ಚಾಂಪಿಯನ್ಸ್ ಆಗಿ ಹೊರಬಂದಿದೆ.
ಪಂದ್ಯ ಶೇಷ್ಟ ಪ್ರಶಸ್ತಿಯನ್ನು ಲಯನ್ಸ್ ಪ್ರೌಢಶಾಲೆಯ ಬಯವಂಡ ಪೊನ್ನಣ್ಣ ಮುಡಿಗೇರಿಸಿಕೊಂಡರು. ಪ್ರಾಥಮಿಕ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತೀಯ ವಿದ್ಯಾಭವನ, ಮಡಿಕೇರಿ ಶಾಲಾ ತಂಡ ಲಯನ್ಸ್ ಗೋಣಿಕೊಪ್ಪಲು ತಂಡದೊಂದಿಗೆ 4-1 ಗೋಲುಗಳಿಂದ ಜಯ ಸಾಧಿಸಿತು. ವಿಜೇತ ತಂಡದ ಪರವಾಗಿ ಡಿವಿನ್-2, ಕಾವೇರಪ್ಪ ಹಾಗೂ ನಿತಿನ್ ತಲಾ ಒಂದೊಂದು ಗೋಲು ಗಳಿಸಿದರು. ಪರಾಜಿತ ತಂಡದ ಪರ ರಜತ್ ಒಂದು ಗೋಲು ದಾಖಲಿಸಿದರು.
ಪ್ರೌಢಶಾಲಾ ವಿಭಾಗದ ಫೈನಲ್ ಪಂದ್ಯದಲ್ಲಿ ಲಯನ್ಸ್ ಗೋಣಿಕೊಪ್ಪಲು ತಂಡ ಭಾರತೀಯ ವಿದ್ಯಾಭವನ, ಮಡಿಕೇರಿ ಶಾಲಾ ತಂಡ 2-1 ಗೋಲುಗಳಿಂದ ಜಯ ಸಾಧಿಸಿತು. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತೀಯ ವಿದ್ಯಾಭವನ ತಂಡ ವಿರೋಚಿತ ಸೋಲು ಅನುಭವಿಸಿತು. ವಿಜೇತ ತಂಡದ ಪರವಾಗಿ ನಾಣಯ್ಯ ಹಾಗೂ ಪೊನ್ನಣ್ಣ ತಲಾ ಒಂದೊಂದು ಗೋಲು ಗಳಿಸಿದರು. ಪರಾಜಿತ ತಂಡದ ಪರ ಮಾಚಯ್ಯ ಒಂದು ಗೋಲು ದಾಖಲಿಸಿದರು.