ಸುಂಟಿಕೊಪ್ಪ, ಡಿ.31: ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಸುಂಟಿಕೊಪ್ಪ ನಾಡು ಕಚೇರಿಯಲ್ಲಿ ಚೆಟ್ಟಳ್ಳಿ ಮತ್ತು 7ನೇ ಹೊಸಕೋಟೆ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಚಂದ್ರಪ್ರಸಾದ್ ಎಂಬ ಅಧಿಕಾರಿ ಲಂಚದ ಆಸೆಗೆ ಬಲಿಯಾಗಿ ಸರೆಯಾಗಿದ್ದಾರೆ.ಚೆಟ್ಟಳ್ಳಿಯ ಚೇರಳ ಶ್ರೀಮಂಗಲ ಗ್ರಾಮದ ಕಾಫಿ ಬೋರ್ಡ್ ನಿವಾಸಿಯಾಗಿರುವ ಪೇರಿಯನ ಉದಯ ಎಂಬವರಿಂದ ರೂ. 7 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ಶಾಂತಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಗಂಗಾಧರಯ್ಯ ಮತ್ತು ಸಿಬ್ಬಂದಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ. ಪೇರಿಯನ ಉದಯ ಹಾಗೂ ಅವರ ಸಹೋದರರ ಆಸ್ತಿ ಪಾಲುಪಾರಿಕತ್ತಿಗೆ ಸಂಬಂಧಿಸಿದಂತೆ ನಮೂನೆ 29 ಮತ್ತು ಪಹಣಿ ಮಾಡಿಸಲು ಡಿ. 8 ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಈ ಕೆಲಸವನ್ನು ಮಾಡಿಕೊಡದೇ ಕಡತವನ್ನು ಬದಿಗಿರಿಸಿ ಕಚೇರಿಗೆ ಅಲೆದಾಡಿಸುತ್ತಾ ರೂ. 10 ಸಾವಿರದ ಲಂಚಕ್ಕೆ ಬೇಡಿಕೆ ಮುಂದಿಟ್ಟಿದ್ದರು ಎನ್ನಲಾಗಿದೆ. ತಾ. 29 ರಂದು ಪೇರಿಯನ ಉದಯರವರು ನಾಡು ಕಚೇರಿಗೆ ಬಂದಾಗ ಇವರಿಬ್ಬರ ನಡುವೆ 3 ಸಾವಿರಕ್ಕೆ ಒಡಂಬಡಿಕೆ ಏರ್ಪಟ್ಟಿತ್ತು ಎನ್ನಲಾಗಿದೆ. ಅಲ್ಲಿಂದ ಕೂಡಲೇ ಮಡಿಕೇರಿಗೆ ತೆರಳಿದ ಪೇರಿಯನ ಉದಯ ಅವರು ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯವರಲ್ಲಿ ಪುಕಾರು ನೀಡಿದ್ದರು. ಆ ಮೇರೆಗೆ ದಾಳಿನ ಸಂಚನ್ನು ರೂಪಿಸಲಾಗಿತ್ತು. ಅದರಂತೆ ಇಂದು ಮಧ್ಯಾಹ್ನ 12.45ರ ಸಮಯದಲ್ಲಿ ಉದಯ ಅವರಿಂದ ರೂ. 3 ಸಾವಿರದ ಬದಲಾಗಿ ಪೂರ್ವ ನಿಯೋಜಿತ ಸಂಚಿನಂತೆ ರೂ. 7 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಡಿ.ವೈ.ಎಸ್.ಪಿ. ಮತ್ತು ಸಿಬ್ಬಂದಿಗಳು ಮಿಂಚಿನ ದಾಳಿ ನಡೆಸಿ ಲಂಚದ ಹಣ ಸಮೇತ ಆರೋಪಿ ಗ್ರಾಮಲೆಕ್ಕಗ ಚಂದ್ರಶೇಖರ್ ಅವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭ್ರಷ್ಟಾಚರ ನಿಗ್ರಹ ದಳದ ಬಲೆಗೆ ಬಿದ್ದಿರುವ ಗ್ರಾಮಲೆಕ್ಕಿಗ ಚಂದ್ರಪ್ರಸಾದ್ ಅವರು ಕಳೆದ ಮೂರು ತಿಂಗಳಿನಿಂದ ಸುಂಟಿಕೊಪ್ಪ ನಾಡು ಕಚೇರಿಯಲ್ಲಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸಿ ಕೊಂಡು ಬರುತ್ತಿದ್ದರು. ನಾಡು ಕಚೇರಿ ಒಳಗೆ ಸ್ಥಳದ ಅಭಾವವಿದ್ದು ದರಿಂದ ಪ್ರವಾಸಿ ಮಂದಿರದ ಪ್ರತ್ಯೇಕವಾದ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಕಚೇರಿಯ ಕೊಠಡಿ ನಾಡುಕಚೇರಿ ಯಿಂದ ಪ್ರತ್ಯೇಕವಾಗಿದ್ದು ಜನರ ಸುಳಿದಾಟ ಕಡಿಮೆಯಿದ್ದುದರಿಂದ ಕ್ಷಣಮಾತ್ರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದವರು ದಾಳಿ ಮಾಡಿದ ವಿಷಯ ಹೊರಬರಲು ಕೊಂಚ ತಡವಾಗಿತ್ತು. ನಂತರ ವಿಷಯವರಿತ ನಾಡುಕಚೇರಿಯ ಸಿಬ್ಬಂದಿಗಳು ದಿಗ್ಭ್ರಮೆಗೆ ಒಳಗಾಗಬೇಕಾಯಿತು.