ಮಡಿಕೇರಿ, ಜ. 15: ಸಂಪಾಜೆ ಗ್ರಾಮ ಪಂಚಾಯಿತಿ ಮತ್ತು ಪಶು ವ್ಯೆದ್ಯ ಇಲಾಖೆ ನೇತೃತ್ವದಲ್ಲಿ ಪಶು ಚಿಕಿತ್ಸಾ ಶಿಬಿರ ಮತ್ತು ಪಶು ಆಧಾರ್ ನೋಂದಾವಣೆಯ ಮತ್ತು ಹುಚ್ಚು ನಾಯಿ ನಿರೋಧಕ ಲಸಿಕೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಉದ್ಘಾಟನೆ ಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ ನೆರವೇರಿಸಿದರು. ಸದರಿ ಯೋಜನೆಯು ಪಶುಗಳಿಗೆ ಆಧಾರ್ ನೋಂದಣಿ ಕಾರ್ಯ ದಿಂದ ಪಶುಗಳ ರಕ್ಷಣೆ, ಪೋಷಣೆ ಮತ್ತು ಸರಕಾರದ ಯೋಜನೆಯನ್ನು ಪಡೆಯಲು ಹಾಕಿರುವ ಕೇಂದ್ರ ಸರಕಾರದ ಈ ವಿನೂತನ ಡಿಜಿಟಲ್ ಯೋಜನೆಯಾಗಿದೆ. ಈ ಯೋಜನೆ ಯನ್ನು ಕೊಡಗಿನಲ್ಲಿ ಪ್ರಥಮವಾಗಿ ಮಾಡಲಾಗಿದ್ದು ಪಶುವ್ಯೆದ್ಯ ಇಲಾಖೆಯ ಮೂಲಕ ಫಲಾನುಭವಿ ಗಳು ಸದುಪಯೋಗಪಡಿಸಬೇಕೆಂದು ತಿಳಿಸಿದರು. ಅಲ್ಲದೆ ಹುಚ್ಚು ನಾಯಿ ನಿರೋಧಕ ಲಸಿಕೆ (ರ್ಯಾಬಿಸ್ ಲಸಿಕೆ)ಯನ್ನು ಸುಮಾರು 150 ನಾಯಿಗಳಿಗೆ ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮ ಸಂಪಾಜೆ ಬೈಲಿನಲ್ಲಿ ಪ್ರಾರಂಭಗೊಂಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಮಾರೋಪ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ, ಉಪಾಧ್ಯಕ್ಷ ಬಿ.ಆರ್. ಸುಂದರ, ಸದಸ್ಯರಾದ ಕುಮಾರ್ ಚೆದ್ಕಾರ್, ಯಮುನಾ ಗಿರೀಶ್, ಗಿರಿಜಾ ಮೋಹನ್, ಮಾಲತಿ ನಾರಾಯಣ, ಇಲಾಖೆಯ ಸಹಾಯಕ ನಿರ್ದೇಶಕರು ಡಾ. ಪ್ರಸನ್ನ, ಡಾ. ಅಶೋಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭರಾಣಿ, ಬಿ.ಎ. ಗಣಪತಿ, ಕೆ.ಎಂ. ಹೊನ್ನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಶು ಜಾಗೃತಿ ಮೂಡಿಸಲಾಯಿತು.