ಗೋಣಿಕೊಪ್ಪಲು, ಜೂ. 3 : ಸಾಲ ಕಟ್ಟಲಾಗದೆ ತೊಂದರೆಯಲ್ಲಿ ಸಿಲುಕಿರುವ ರೈತನ ಆಸ್ತಿ ಮುಟ್ಟುಗೋಲುವಿಗೆ ಮುಂದಾಗಿರುವ ಬ್ಯಾಂಕ್ ಕ್ರಮವನ್ನು ಖಂಡಿಸಿ ರೈತಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನಿಟ್ಟೂರು ಗ್ರಾಮದ ಮಲ್ಚೀರ. ಜಿ. ತಮ್ಮಯ್ಯ ಕಾಫಿ ತೋಟದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು ರೈತಸಂಘದ ಆಸ್ತಿ ಎಂಬ ನಾಮಫಲಕ ನಿರ್ಮಿಸುವ ಮೂಲಕ ಎಚ್ಚರಿಕೆ ನೀಡುವ ಮೂಲಕ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಬ್ಯಾಂಕ್‍ಗಳು ರೈತರ ಭೂಮಿ ಹಾಗೂ ತೋಟವನ್ನು ಇ ಹರಾಜು ಮಾರಾಟ ಮಾಡುವದನ್ನು ನಿಲ್ಲಿಸಬೇಕು. ಸಾಲವನ್ನು ಕಂತು ಅಥವಾ ಒಂದೇ ಕಂತು ಪಾವತಿಗೆ ಅವಕಾಶ ನೀಡಬೇಕು. ರೈತರ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಘೋಷಿಸಬೇಕು ಹಾಗೂ ವೈಜ್ಞಾನಿಕ ಬೆಲೆ ನೀಡಬೇಕು ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ರೈತ ತಮ್ಮಯ್ಯ ಮಾಹಿತಿ ನೀಡಿ, 2002 ರಲ್ಲಿ ವೀರಾಜಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ರೂ 10 ಲಕ್ಷ ಸಾಲ ಪಡೆÉದಿದ್ದೆ. ನಂತರ 85 ಸಾವಿರ, 1.75 ಲಕ್ಷ, 40 ಸಾವಿರ, ಹೀಗೆ ಒಟ್ಟು ರೂ 3 ಲಕ್ಷ ಕಟ್ಟಿದ್ದೇನೆ. ರೂ 10 ಲಕ್ಷವಿದ್ದ ಸಾಲದ ಮೊತ್ತ 2009 ರಲ್ಲಿ 26.92 ಲಕ್ಷ, 2016 ರಲ್ಲಿ 69.82 ಲಕ್ಷ ಏರಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ ಮಾತನಾಡಿ, ಕೆಲವು ಬ್ಯಾಂಕ್ ಅಧಿಕಾರಿಗಳು ರೈತರ ಸಾಲದ ಕಂತು ಕಟ್ಟಿದ್ದರೂ ಸೂಕ್ತ ದಾಖಲಾತಿ ನೀಡದೆ, ಶೋಷಣೆ ಮಾಡುತ್ತಿರುವದು ಖಂಡನೀಯ. ದಲ್ಲಾಳಿ ವ್ಯವಸ್ಥೆ ನಿಲ್ಲಿಸಬೇಕು. ರೈತ ಸಂಘ ಬ್ಯಾಂಕ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪರಿಣಾಮ ಸಾಲದ ಮೊತ್ತವನ್ನು 35 ಲಕ್ಷಕ್ಕೆ ಇಳಿಸಿದ್ದಾರೆ. ಈಗ ತಮ್ಮಯ್ಯ ಅವರಿಗೆ ಸೇರಿದ 6 ಏಕರೆ ಕಾಫಿ ತೋಟವನ್ನು ಇ ಟೆಂಡರ್ ಮೂಲಕ ಹರಾಜಿಗೆ ಮುಂದಾಗಿರುವದು ಖಂಡನೀಯ.

ಈ ಬಗ್ಗೆ ಬೆಂಗಳೂರಿನಲ್ಲಿ ರಾಜ್ಯ ರೈತ ಸಂಘ ಅಧ್ಯಕ್ಷ ಪುಟ್ಟಣಯ್ಯ ನೇತೃತ್ವದಲ್ಲಿ ಸಭೆ ನಡೆದಿದೆ. ಬ್ಯಾಂಕ್ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸ ಲಾಗಿದೆ. ಬ್ಯಾಂಕ್ ಇ ಹರಾಜು ಪ್ರಕ್ರಿಯೆಯನ್ನು ಕೈಬಿಡಬೇಕು, ತಾ. 24 ರಂದು ಇ ಹರಾಜು ನಡೆಯುವದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸುತ್ತದೆ. ಜಿಲ್ಲಾಧಿಕಾರಿ ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು. ರೈತ ಚಿಮ್ಮಂಗಡ ಗಣೇಶ್ ಮಾತನಾಡಿ, ರೈತರಿಗೆ ಬೆಂಬಲವಾಗಿ ನಿಲ್ಲದ ಜನಪ್ರತಿನಿಧಿಗಳು ರೈತರ ವಿಚಾರವನ್ನು ಮಾತಾಡುವದನ್ನು ನಿಲ್ಲಿಸಬೇಕು. ಯಾವದೇ ಬೆಂಬಲ ಜನಪ್ರತಿನಿಧಿಗಳಿಂದ ದೊರೆಯುತ್ತಿಲ್ಲ. ತಮ್ಮಯ್ಯ ಅವರ ಆಸ್ತಿಯನ್ನು ರೈತ ಸಂಘದ ಆಸ್ತಿ ಎಂದು ನಾವು ಹೋರಾಟ ನಡೆಸುತ್ತೇವೆ ಎಂದರು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಕಾರ್ಯದರ್ಶಿ ಕಳ್ಳಿಚಂಡ ಧನು, ಸದಸ್ಯರುಗಳಾದ ಮಲ್ಚೀರ ಅಶೋಕ್, ಮಲ್ಚೀರ ಗಿರೀಶ್, ರೈತ ಮಲ್ಚೀರ ತಮ್ಮಯ್ಯ ಉಪಸ್ಥಿತರಿದ್ದರು.