ಮಡಿಕೇರಿ, ನ. 4: ಕೊಡಗು ಜಿಲ್ಲಾ ಕಾಂಗ್ರೆಸ್‍ನ ಪ್ರಬಾರ ಅಧ್ಯಕ್ಷರಾಗಿರುವ ಟಿ.ಪಿ. ರಮೇಶ್ ಅವರಿಗೆ ನಿಗಮ ಮಂಡಳಿಯಲ್ಲಿ ಮತ್ತೊಮ್ಮೆ ಅವಕಾಶ ದೊರೆತಿದೆ. ಈ ಹಿಂದೆ ತಂಬಾಕು ಮಂಡಳಿಯ ಅಧ್ಯಕ್ಷ ಸ್ಥಾನ ದೊರೆತಿತ್ತಾದರೂ ಅವರು ಈ ಮಂಡಳಿಯನ್ನು ನಿರಾಕರಿಸಿದ್ದರು. ಇದೀಗ ಮೊನ್ನೆ ಸಿದ್ದರಾಮಯ್ಯ ಸರಕಾರ ಬಾಕಿ ಉಳಿದಿದ್ದ ನಿಗಮ ಮಂಡಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಕರ್ನಾಟಕ ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿಯ ಅಧ್ಯಕ್ಷರಾಗಿ ಟಿ.ಪಿ. ರಮೇಶ್ ಅವರಿಗೆ ಮತ್ತೊಂದು ಅವಕಾಶ ನೀಡಿದೆ.
ನೂತನ ಅಧ್ಯಕ್ಷರಾಗಿ ಟಿ.ಪಿ. ರಮೇಶ್ ಅವರು ಇಂದು ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು. ಕೊಡಗಿನಿಂದ ಕಾಂಗ್ರೆಸ್‍ನ ಬಿ.ಎಸ್. ಪ್ರಕಾಶ್, ನಟೇಶ್ ಗೌಡ, ಗಣೇಶ್ ಮೊದಲಿಯಾರ್, ಡಿ.ಪಿ. ರಾಜೇಶ್, ಅಶೋಕ್, ನಾಣಯ್ಯ, ಶೌಕತ್ ಆಲಿ ಪಾಲ್ಗೊಂಡಿದ್ದರು.
‘ಶಕ್ತಿ’ಯೊಂದಿಗೆ ಮಾತನಾಡಿದ ರಮೇಶ್ ಅವರು ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಿ ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಲಾಭದಾಯಕಗೊಳಿಸುವದು ಮಂಡಳಿಯ ಕೆಲಸವಾಗಿದೆ. ವಿಶ್ವ ವ್ಯಾಪಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಬಂದ ಬಳಿಕ ಸರಕಾರದ ಈ ಸಂಸ್ಥೆಗೆ ಸ್ವಲ್ಪ ಹೊಡೆತ ಬಿದ್ದಿದೆ. ಇದನ್ನು ಪುನಶ್ಚೇತನಗೊಳಿಸಿ ಹೊಸ ರೂಪ ಕೊಡಲು ಶ್ರಮಿಸುವದಾಗಿ ಹೇಳಿದರು.
ಪದ್ಮಿನಿ ಸೋಮವಾರ ಅಧಿಕಾರ
ಕೊಡಗಿನ ಮತ್ತೋರ್ವರಾಗಿ ಮಾಂಗೆರ ಪದ್ಮಿನಿ ಪೊನ್ನಪ್ಪ ಅವರಿಗೂ ಈ ಬಾರಿ ಅವಕಾಶ ದೊರೆತಿದೆ. ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಪದ್ಮಿನಿ ಅವರಿಗೆ ಅಧಿಕಾರ ನೀಡಲಾಗಿದ್ದು, ಅವರು ತಾ 7 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.