ಸೋಮವಾರಪೇಟೆ, ಸೆ. 22: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರೂ. 2,65,517.07 ವ್ಯಾಪಾರ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಎ. ಉದಯ ಹೇಳಿದರು.
ಸ್ಥಳೀಯ ಕೊಡವ ಸಮಾಜದಲ್ಲಿ ನಡೆದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 2015-16ನೇ ಸಾಲಿನಲ್ಲಿ ಸಂಘದಿಂದ ಒಟ್ಟು 51.89 ಲಕ್ಷ ವ್ಯಾಪಾರ ವಹಿವಾಟು ನಡೆಸಲಾಗಿತ್ತು 2,65,517.07 ವ್ಯಾಪಾರ ಲಾಭ ಗಳಿಸಿದ್ದು, ಹಿಂದಿನ ಸಾಲಿಗಿಂತ ರೂ. 53079.75 ಹೆಚ್ಚಿಗೆ ಲಾಭ ಗಳಿಸಿದೆ ಎಂದರು.
ಸಂಘದ ಸದಸ್ಯರಿಗೆ ಯಶಸ್ವಿನಿ ರೈತ ಆರೋಗ್ಯ ವಿಮಾ ಯೋಜನೆ ಸೌಲಭ್ಯವಿದ್ದು, ಜುಲೈ 2016ರ ಅಂತ್ಯಕ್ಕೆ 112 ಜನರು ಸದಸ್ಯರಾಗಿರುತ್ತಾರೆ. ಸಂಘದಿಂದ ಈಗಾಗಲೇ ಗ್ರಾಹಕರಿಗೆ ಅನುಕೂಲವಾಗುವಂತೆ ಚಿಟ್ ಫಂಡ್, ರಿಯಾಯಿತಿ ದರದಲ್ಲಿ ಭದ್ರತಾ ಕಪಾಟುಗಳ ಸೌಲಭ್ಯ, ಇ-ಸ್ಟ್ಯಾಂಪ್ ವಿಭಾಗವನ್ನು ತೆರೆಯಲಾಗಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಿ.ಪಿ. ಶಿವಕುಮಾರ್, ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್, ಹೆಚ್.ಕೆ. ಮಾದಪ್ಪ, ಬಿ.ಎಂ. ರಾಮ್ ಪ್ರಸಾದ್, ನಳಿನಿ ಗಣೇಶ್, ವರಲಕ್ಷ್ಮೀ ಸಿದ್ದೇಶ್ವರ್, ಎಂ. ಶ್ರೀಕಾಂತ್, ಬಿ.ಆರ್. ಮೃತ್ಯುಂಜಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎ. ಪಾರ್ವತಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಂಘದ ನವೀಕೃತ ಕಟ್ಟಡದ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.