ಕುಶಾಲನಗರ, ನ. 4: ರಾಹುಲ್ ಗಾಂಧಿ ಅವರನ್ನು ದೆಹಲಿ ಪೊಲೀಸರು ಬಂಧನಕ್ಕೆ ಒಳಪಡಿಸಿದ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಘಟಕದಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, ಸಮಾನ ವೇತನ ಸಮಾನ ಪಿಂಚಣಿ ಯೋಜನೆ ಜಾರಿಗೊಳಿಸುವಲ್ಲಿ ವಿಳಂಭ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗುವ ಮೂಲಕ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಹುತಾತ್ಮ ರಾಗಿದ್ದಾರೆ. ಈ ನಿಟ್ಟಿನಲ್ಲಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ತೆರಳಿದ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಂಧಿಸಿರುವ ಕ್ರಮ ಖಂಡನೀಯ. ಕುಟುಂಬ ಸದಸ್ಯರಿಗೆ ಕನಿಷ್ಟ ಸಾಂತ್ವನ ಹೇಳಲು ತೆರಳದ ಪ್ರಧಾನಿ ಯೋಧ ರೊಂದಿಗೆ ದೀಪಾವಳಿ ಆಚರಿಸಿ ನಕಲಿ ದೇಶಪ್ರೇಮ ತೋರ್ಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದೇ ಸಂದರ್ಭ ಮಾನವ ಸರಪಳಿ ರಚಿಸುವ ಮೂಲಕ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ನಡೆಸಿದರು.

ಪ್ರತಿಭಟನೆಯಲ್ಲಿ ಕುಶಾಲನಗರ ನಗರ ಘಟಕದ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಟ್ಟಣ ಪಂಚಾಯ್ತಿ ಸದಸ್ಯ ಪ್ರಮೋದ್ ಮುತ್ತಪ್ಪ, ಹೆಚ್.ಜೆ. ಕರಿಯಪ್ಪ, ಹೆಚ್.ಕೆ. ಪಾರ್ವತಿ, ಶಿವಶಂಕರ್, ಫಜಲುಲ್ಲಾ, ಪ್ರಮುಖರಾದ ಎಸ್.ಎನ್. ನರಸಿಂಹಮೂರ್ತಿ, ಅಬ್ದುಲ್ ಖಾದರ್, ಚಂದನ್ ಮತ್ತಿತರರು ಇದ್ದರು.