ಪೊನ್ನಂಪೇಟೆ, ನ. 29: ಹರಿಯಾಣದ ರೋಥಕ್ನಲ್ಲಿ ಜರುಗುತ್ತಿರುವ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಮೂವರು ಆಟಗಾರರನ್ನು ಒಳಗೊಂಡ ರಾಜ್ಯ ತಂಡ ತಮಿಳುನಾಡು ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ತಲಪಿದೆ.ರೋಥಕ್ನ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರದಿಂದ ಆರಂಭಗೊಂಡ ಮೊದಲ ಪಂದ್ಯದಲ್ಲೇ ಎದುರಾಳಿ ತಮಿಳುನಾಡು ತಂಡವನ್ನು 4-1 ಗೋಲುಗಳಿಂದ ಮಣಿಸಿದ ರಾಜ್ಯ ತಂಡ ಮುನ್ನಡೆ ಸಾಧಿಸಿದೆ. ಪಂದ್ಯ ಆರಂಭಗೊಂಡ 3ನೇ ನಿಮಿಷದಲ್ಲೆ ಮಿಂಚಿನ ಫೀಲ್ಡ್ ಗೋಲ್ ಒಂದನ್ನು ಬಾರಿಸಿದ ಕರ್ನಾಟಕ ತಂಡದ ರಾಹುಲ್ ಖಾತೆ ತೆರದು ಶುಭಾರಂಭ ಮಾಡಿದರು. ಬಳಿಕ ಎದುರಾಳಿ ತಮಿಳುನಾಡು ತಂಡ ಗೋಲೊಂದನ್ನು ದಾಖಲಿಸಿ ಸಮನಾಗಿಸಿತು.
ಇದಾದ ಬಳಿಕ ಎದುರಾಳಿಗಳ ಸವಾಲನ್ನು ಸಮರ್ಥವಾಗಿ ಸ್ವೀಕರಿಸಿದ ರಾಜ್ಯ ತಂಡ ಮತ್ತೆ 3 ಗೋಲುಗಳನ್ನು ಸತತವಾಗಿ ದಾಖಲಿಸಿ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು. ವಿಜೇತ ತಂಡದ ಪರವಾಗಿ ಕೊಡಗಿನ ಆಟಗಾರರಾದ ಮಹಮದ್ ಹುಮೈಜ್, ಗೌರವ್ ತಲಾ ಒಂದು ಗೋಲು ಬಾರಿಸಿದರೆ ಮತ್ತೋರ್ವ ಆಟಗಾರ ಕಾರ್ತಿಕ್ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ನೆರವಾದರು.
ಭಾನುವಾರದಿಂದ ಆರಂಭ ಗೊಂಡ ಬಾಲಕ ರಾಷ್ಟ್ರೀಯ ಹಾಕಿ ಟೂರ್ನಿ ಮೊದಲ ಹಂತದಲ್ಲಿ ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದು, ಬಳಿಕ ನಾಕೌಟ್ ನಿಯಮಾವಳಿಯಲ್ಲಿ ಜರುಗಿಲಿದೆ ಎಂದು ಕರ್ನಾಟಕ ರಾಜ್ಯ ತಂಡದ ತರಬೇತುದಾರ ಅರುಣ್ ಅಮ್ಮತ್ತಿ ಮಾಹಿತಿ ನೀಡಿದ್ದಾರೆ.