ಮಡಿಕೇರಿ, ಜ. 4: ಹರಿಯಾಣದ ರೋಹ್ಟಕ್‍ನಲ್ಲಿ ತಾ. 12 ರಿಂದ 16 ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ವಿಧ್ವಾನ್ ಕೆ.ಟಿ. ರಾಜೇಶ್ ಆಚಾರ್ಯ ಅವರ ವಿದ್ಯಾರ್ಥಿ ಬಿ.ಎಂ. ಕಾರ್ತಿಕ್ ಶೆಣೈ ಶಾಸ್ತ್ರೀಯ ನೃತ್ಯ ಪ್ರಾಕಾರಗಳಲ್ಲಿ ಒಂದಾದ ಕೂಚುಪುಡಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯ ಯುವಜನೋತ್ಸವದಲ್ಲಿ ಬಿ.ಎಂ. ಕಾರ್ತಿಕ್ ಶೆಣೈ ಕೂಚುಪುಡಿ ನೃತ್ಯ ವಿಭಾಗದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟ್ರೀಯ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ.

ಇವರು ವೀರಾಜಪೇಟೆಯ ಸೈಂಟ್ ಆ್ಯನ್ಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿಯಾಗಿದ್ದು, ಕೊಡಗು ಸಮಾಚಾರ ಪತ್ರಿಕೆ ಸಂಪಾದಕ ಮನುಶೆಣೈ ಅವರ ಪುತ್ರ. ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗಳಿಸಿದ್ದಾರೆ.