ಮಡಿಕೇರಿ, ನ. 6: ಇತ್ತೀಚೆಗೆ ದೆಹಲಿಯ ರಾಷ್ಟ್ರೀಯ ಬಾಲ ಭವನದಲ್ಲಿ ನಡೆದ ರಾಷ್ಟ್ರೀಯ ಸ್ಪೋಟ್ರ್ಸ್ ಏರೋಬಿಕ್ಸ್ ಮತ್ತು ಹಿಪ್‍ಹಾಪ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕೊಡಗಿನ ಕಾವೇರಿ ಆರ್ಟ್ ಸ್ಕೂಲ್‍ನ 7 ಮಂದಿ ಕ್ರೀಡಾಪಟುಗಳು 5 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆದ್ದು ಸಾಧನೆ ಮೆರೆದಿದ್ದಾರೆ.

ಸ್ಪೋಟ್ರ್ಸ್ ಏರೋಬಿಕ್ಸ್, ಫಿಟ್‍ನೆಸ್ ಏರೋಬಿಕ್ಸ್ ಹಾಗೂ ಹಿಪ್‍ಹಾಪ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದ ಕರ್ನಾಟಕ ತಂಡ ಒಟ್ಟು 8 ಚಿನ್ನ, 6 ಬೆಳ್ಳಿ, 2 ಕಂಚಿನ ಪದಕ ಗಳಿಸಿತು. ಇದರಲ್ಲಿ ಸಿಂಹಪಾಲು ಕೊಡಗಿನ ಸ್ಪರ್ಧಿಗಳದ್ದಾಗಿದೆ. ರಾಜ್ಯಕ್ಕೆ ಪದಕ ಪಟ್ಟಿಯಲ್ಲಿ 3ನೇ ಸ್ಥಾನ ದೊರಕಿತು. ಮಹಾರಾಷ್ಟ್ರ ಹಾಗೂ ದೆಹಲಿ ಮೊದಲೆರಡು ಸ್ಥಾನ ಪಡೆಯಿತು. ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ರಾಹುಲ್ ಎಸ್ ರಾವ್, ಚೇತನ್ ಪೂಜಾರಿ, ಪೃಥ್ವಿ ಹೆಚ್.ಕೆ., ರಾಸಿ ಎಸ್.ರಾವ್, ಉಲ್ಲಾಸ್ ರಾಜ್, ಯಶಸ್ವಿನಿ ಡಿ.ಎಸ್., ರುತ್ವಿಕ್ ಕೆ.ಡಿ. ತಂಡದ ತರಬೇತುದಾರರಾಗಿ ವಿನೋದ್ ಕರ್ಕೇರಾ ತೆರಳಿದ್ದರು.

ರಾಹುಲ್ ರಾವ್ ಸ್ಪೋಟ್ರ್ಸ್ ಏರೋಬಿಕ್ಸ್‍ನ ಪುರುಷರ ವೈಯಕ್ತಿಕ, ಮಿಶ್ರಜೋಡಿ, ತ್ರಿವಳಿ ವಿಭಾಗಗಳಲ್ಲಿ ಹಾಗೂ ಹಿಪ್‍ಹಾಪ್ ತಂಡ, ಹಿಪ್‍ಹಾಪ್ ಬ್ಯಾಟಲ್ ವಿಭಾಗಗಳಲ್ಲಿ ಭಾಗವಹಿಸಿ 5 ಚಿನ್ನದ ಪದಕ ಪಡೆದುಕೊಂಡರು. ಅಲ್ಲದೆ ಚಾಂಪಿಯನ್‍ಶಿಪ್‍ನ ‘ಬೆಸ್ಟ್ ಅಥ್ಲೀಟ್' ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಸಾಧನೆಯೊಂದಿಗೆ ತಂಡದ 7 ಮಂದಿ ತಾ. 19ರಿಂದ 22ರವರೆಗೆ ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಚಾಂಪಿಯನ್ ಶಿಪ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಆದರೆ ಪ್ರಯಾಣ, ವಸತಿ, ಆಹಾರ, ಪ್ರವೇಶ ಶುಲ್ಕ ಎಲ್ಲಾ ಸೇರಿ ತಲಾ 1.65 ಲಕ್ಷ ರೂ. ಭರಿಸಬೇಕಾಗಿದ್ದು, ಇದು ಪ್ರತಿಭಾವಂತ ಕ್ರೀಡಾಳುಗಳಿಗೆ ಹೊರೆಯಾಗಿದೆ. ಹಿಂದೆಯೂ ಕಾವೇರಿ ಆರ್ಟ್ ಸ್ಕೂಲ್‍ನ ವಿದ್ಯಾರ್ಥಿಗಳು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ಅವಕಾಶ ತಪ್ಪಿ ಹೋಗಿತ್ತು. ಜಿಲ್ಲಾಡಳಿತ, ದಾನಿಗಳು ಹಾಗೂ ಕ್ರೀಡಾಭಿಮಾನಿಗಳ ಪ್ರೋತ್ಸಾಹ ಇದ್ದರೆ ಮಾತ್ರ ಮತ್ತಷ್ಟು ಸಾಧನೆ ಮಾಡಲು ಸಾಧ್ಯ ಎಂದು ಸಂಸ್ಥೆಯ ಮುಖ್ಯಸ್ಥ ವಿನೋದ್ ಕರ್ಕೇರಾ ತಿಳಿಸಿದ್ದಾರೆ.