ಪೊನ್ನಂಪೇಟೆ, ನ. 25: ಹರಿಯಾಣ ರಾಜ್ಯದ ರೋಥಕ್‍ನಲ್ಲಿ ತಾ. 27 ರಿಂದ ಆರಂಭಗೊಳ್ಳಲಿರುವ 14 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದು, ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪೊನ್ನಂಪೇಟೆ ಸಂತ ಅಂಥೋಣಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಾದ ಟಿ. ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಚೊಟ್ಟೆಯಂಡಮಾಡ ಗೌರವ್, ಪೊನ್ನಂಪೇಟೆಯ ಬಿ.ಆರ್. ಬಿಪಿನ್ ಹಾಗೂ ಮೂಲತ: ಸೋಮವಾರಪೇಟೆ ಯವನಾದ ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿರುವ ಪೊನ್ನಂಪೇಟೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿ ಮೊಹಮ್ಮದ್ ಹುಮೈಜ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡವರಾಗಿದ್ದಾರೆ. ಕೊಡಗಿನ ಮೂವರು ವಿದ್ಯಾರ್ಥಿಗಳನ್ನೊಳಗೊಂಡ 16 ವಿದ್ಯಾರ್ಥಿಗಳ ತಂಡ ತರಬೇತು ದಾರರಾಗಿರುವ ಪೊನ್ನಂಪೇಟೆಯ ಸಂತ ಅಂಥೋಣಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ಅರುಣ್ ಅಮ್ಮತ್ತಿ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಹರಿಯಾಣಕ್ಕೆ ಪ್ರಯಾಣ ಬೆಳೆಸಿದೆ.
14 ವರ್ಷದೊಳಗಿನ ಬಾಲಕರ ಕರ್ನಾಟಕ ಹಾಕಿ ತಂಡ ಹಾಸನದ ಆದಿಚುಂಚನಗಿರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ರಾಹುಲ್ ನೇತೃತ್ವದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ದಲ್ಲಿ ಪಾಲ್ಗೊಳ್ಳಲಿದೆ. ತಂಡದಲ್ಲಿ ಕೊಡಗಿನ ಮೂವರು ವಿದ್ಯಾರ್ಥಿಗಳು ಸೇರಿದಂತೆ ಹಾಸನ ಜಿಲ್ಲೆಯ 8, ಶಿವಮೊಗ್ಗ ಜಿಲ್ಲೆಯ ಮೂವರು ಹಾಗೂ ಬೆಂಗಳೂರು ಜಿಲ್ಲೆಯ ಇಬ್ಬರು ಸೇರಿದಂತೆ 16 ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೆರೆಗೋಡು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸುಜತ್ ಆಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕರ್ನಾಟಕ ತಂಡದ ತರಬೇತುದಾರ ಅರುಣ್ ಅಮ್ಮತ್ತಿ ‘ಶಕ್ತಿ’ಗೆ ತಿಳಿಸಿದ್ದಾರೆ.
- ರಫೀಕ್ ತೂಚಮಕೇರಿ