ಮಡಿಕೇರಿ, ಡಿ.24 : ಕೊಡಗಿನಲ್ಲಿ ಶತಮಾನಗಳಿಂದ ನೆಲೆಸಿರುವ ಆದಿವಾಸಿ ಜನಾಂಗದ ಮುಗ್ಧತೆ ಯನ್ನು ದುರ್ಬಳಕೆ ಮಾಡಿಕೊಂಡು ರಾಷ್ಟ್ರಘಾತುಕ ಶಕ್ತಿಗಳು ಜಿಲ್ಲೆಯಲ್ಲಿ ಬೇರೂರದಂತೆ, ಕೊಡಗಿನ ಜನತೆ ಜಾಗೃತರಾಗುವಂತೆ ಭಾರತ ಸುರಕ್ಷಾ ಮಂಚ್ ಅಧ್ಯಕ್ಷ ಹಾಗೂ ‘ನಮಾಮಿ ಕಾವೇರಿ’ ಆಂದೋಲನ ಸಂಯೋಜಕ ಚಿ.ನಾ. ಸೋಮೇಶ್ ಕಳಕಳಿ ವ್ಯಕ್ತಪಡಿಸಿದ್ದಾರೆ. ದಿಡ್ಡಳ್ಳಿ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಮತಬ್ಯಾಂಕ್ ರಾಜಕಾರಣ ದೊಂದಿಗೆ ಸಮಾಜಘಾತುಕರ ತುಷ್ಟೀಕರಣವೇ ಕೊಡಗಿನ ಶಾಂತಿಗೆ ಭಂಗ ತಂದೊಡ್ಡುವಂತಾಗಿದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಪುಣ್ಯಭೂಮಿ ಕೊಡಗಿನ ಉದ್ದಗಲಕ್ಕೂ ದೇವರಕಾಡು, ಗೋಮಾಳ, ಪೈಸಾರಿ, ಬಾಣೆಗಳಲ್ಲಿ ಕಾನೂನುಬಾಹಿರವಾಗಿ ತಳವೂರಿರುವ ಮಂದಿಯನ್ನು ಬಳಸಿಕೊಂಡಿರುವ ಸಮಾಜಘಾತುಕ ಶಕ್ತಿಗಳು, ಈ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧವಿರಿಸಿಕೊಂಡಿರುವ ಆದಿವಾಸಿಗಳನ್ನು ಜಗತ್ತಿನ ಎದುರು ಬೆತ್ತಲೆಗೊಳಿಸಿರುವದು ಖಂಡನೀಯ ಎಂದು ಸೋಮೇಶ್ ಟೀಕಿಸಿದ್ದಾರೆ.

ವೀರ ಪರಂಪರೆಯ ಕೊಡಗಿನಲ್ಲಿ ರಾಷ್ಟ್ರಘಾತುಕರು ನೆಲೆ ಕಂಡುಕೊಳ್ಳಲು ದೂರದೃಷ್ಟಿಯಿಲ್ಲದ ರಾಜಕೀಯ ಶಾಹಿತ್ವ ಹೊಣೆ ಹೊರಬೇಕಾದೀತು ಎಂದು ಆರೋಪಿಸಿರುವ ಅವರು, ದಿಡ್ಡಳ್ಳಿ ಬೆಳವಣಿಗೆ ಕುರಿತು ಜಿಲ್ಲಾಡಳಿತ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮ ಶ್ಲಾಘನೀಯ ಎಂದು ತಿಳಿಸಿದ್ದಾರೆ. ಭಾರತದ ಏಕತೆಯೊಂದಿಗೆ ಈ ನೆಲದ ಬಗ್ಗೆ ಗೌರವದ ಬದಲು, ಭೋಗ ಜೀವನ ಕಂಡುಕೊಂಡಿರುವ “ಮಾಫಿಯಾ ಮಂದಿ” ನಿರಂತರವಾಗಿ ಕೊಡಗಿನಲ್ಲಿ ಶಾಂತಿ ಕದಡಲು ಮುಂದಾಗಿದ್ದು; ಜಿಲ್ಲಾಡಳಿತದೊಂದಿಗೆ ಸರ್ಕಾರ ಈ ದಿಸೆಯಲ್ಲಿ ನಿಗಾವಹಿಸುವಂತೆ ಆಗ್ರಹಿಸಿದ್ದಾರೆ.

ಕೊಡಗಿನ ನೆಲ, ಜಲ, ಸಂಸ್ಕøತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಆದಿವಾಸಿ ಗಳನ್ನು ಒಕ್ಕಲೆಬ್ಬಿಸಿ, ಬಾಂಗ್ಲಾ ವಲಸಿಗರು ಸೇರಿದಂತೆ ಇತರರು ಕಾರ್ಮಿಕರ ಸೋಗಿನಲ್ಲಿ ಜಿಲ್ಲೆಯಲ್ಲಿ ತಳವೂರಲು ಅವಕಾಶ ಕಲ್ಪಿಸಿರುವ ಪರಿಣಾಮದ ಕಿಡಿಯು ದಿಡ್ಡಳ್ಳಿ ನೆಪದೊಂದಿಗೆ ಸ್ಫೋಟಗೊಳ್ಳು ವಂತಾಗಿದೆ ಎಂಬದಾಗಿ ಅವರು ಬಣ್ಣಿಸಿದ್ದಾರೆ.

ಜಿಲ್ಲೆಯಲ್ಲಿ ವಿಚ್ಚಿದ್ರಕಾರಕ ರಾಜಕೀಯ ನೆರಳಿನೊಂದಿಗೆ ‘ಮಾಫಿಯಾ’ ಜಗತ್ತು ನೆಲೆ ಕಂಡುಕೊಳ್ಳುವ ಯತ್ನವನ್ನು ಮೊಳಕೆಯಲ್ಲೇ ಚಿವುಟುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವ ಅವರು, ಕೊಡಗಿನ ಸ್ವಾಸ್ತ್ಯ ಕೆಡಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಪಡಿಸಿದ್ದಾರೆ. ಸಮಾಜವನ್ನು ಒಡೆದು ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವ ನೆಲೆಯಿಲ್ಲದ ರಾಜಕೀಯ ಮಂದಿಯ ಬಗ್ಗೆಯೂ ಜಿಲ್ಲೆಯ ಜನತೆ ಜಾಗ್ರತೆ ವಹಿಸಬೇಕೆಂದು ಸೋಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.