ಮಡಿಕೇರಿ, ಡಿ. 2: ರಾಜ್ಯ ವಿಜ್ಞಾನ ಪರಿಷತ್‍ನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ ಹಾಗೂ ಡಿ.ಸಿ.ಸಿ. ಬ್ಯಾಂಕ್ ಸಹಯೋಗದೊಂದಿಗೆ ಮಡಿಕೇರಿ ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಂಗಳವಾರ ಕೊಡಗು ಜಿಲ್ಲಾಮಟ್ಟದ 24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಏರ್ಪಡಿಸಲಾಗಿತ್ತು.

ಸಮಾವೇಶದಲ್ಲಿ ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ಎಂಬ ಕೇಂದ್ರ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ತಾವು ರೂಪಿಸಿ ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ಮಂಡಿಸಿದ ಈ ಕೆಳಕಂಡ ಶಾಲಾ ತಂಡಗಳು ತಾ. 3 ರಿಂದ 5 ರತನಕ 3 ದಿನಗಳ ಕಾಲ ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನಡೆಯಲಿರುವ 24 ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಗರ ಕಿರಿಯ ವಿಭಾಗ: ಮಡಿಕೇರಿಯ ಜನರಲ್ ತಿಮ್ಮಯ್ಯ ಪ್ರೌಢಶಾಲೆಯ ಮಹಮ್ಮದ್ ಆಯಿಜಾನ್ ತಂಡ (ಆರೋಗ್ಯ, ಸ್ವಚ್ಛತೆ, ಪೌಷ್ಟಿಕತೆ), ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಹರ್ಷ್ ಪೊನ್ನಪ್ಪ ಮತ್ತು ತಂಡ (ಆರೋಗ್ಯ ಮತ್ತು ಸ್ವಚ್ಛತೆ).

ಗ್ರಾಮಾಂತರ ಕಿರಿಯ ವಿಭಾಗ: ಸೋಮವಾರಪೇಟೆಯ ಚೌಡ್ಲುವಿನ ಓ.ಎಲ್.ವಿ. ಕಾನ್ವಂಟ್‍ನ ಎಂ. ಬಿಪಿನ್ ಮತ್ತು ತಂಡ (ಪ್ರಾಕೃತಿಕ ಔಷಧಿಗಳು), ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಬಿ. ಕೃತಿಕ್ ಮತ್ತು ತಂಡ (ಗಟ್ಟಿಕಸದ ನಿರ್ವಹಣೆ).

ನಗರ ಹಿರಿಯ ವಿಭಾಗ: ಮಡಿಕೇರಿ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ಶಹನಾ ರುಕಿಯಾ ಮತ್ತು ತಂಡ(ಇಂಗಾಲದ ಹೆಜ್ಜೆ ಗುರುತುಗಳು), ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಲಿಸಾ ಭೋಜಮ್ಮ ಮತ್ತು ತಂಡ (ವಿಕಲಚೇತನರಿಗೆ ಇರುವ ಅವಕಾಶಗಳು), ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ಕೆ.ಎಂ. ತಂಗಮ್ಮ ಮತ್ತು ತಂಡ (ಹಳೆಯ ಸಾಂಪ್ರದಾಯಿಕ ಜ್ಞಾನ ಪದ್ಧತಿ).

ಗ್ರಾಮಾಂತರ ಹಿರಿಯ ವಿಭಾಗ: ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಎಂ.ಎಸ್. ಹಸೀನಾ ಮತ್ತು ತಂಡ (ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ), ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಪಿ.ಆರ್. ಗಣೇಶ್ ಮತ್ತು ತಂಡ (ನೆಲ-ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ) ಹಾಗೂ ಸೋಮವಾರಪೇಟೆಯ ಚೌಡ್ಲುವಿನ ಓ.ಎಲ್.ವಿ. ಪ್ರೌಢಶಾಲೆಯ ತನ್ವಿತಾ ಶೆಟ್ಟಿ ಮತ್ತು ತಂಡ (ಜೀವನಕ್ಕಾಗಿ ಮಳೆ ಹನಿಗಳು).

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಮಾಜಿ ಗೌರವಾಧ್ಯಕ್ಷರಾದ ಕೊಡಗು ಜಿಲ್ಲಾ ವಿದ್ಯಾ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ವಿದ್ಯಾರ್ಥಿಗಳು ಈ ಸಮಾವೇಶದ ಮೂಲಕ ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು ಭವಿಷ್ಯದ ವಿಜ್ಞಾನಿಗಳಾಗಿ ರೂಪುಗೊಳ್ಳಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರ್ರೆಸೆಂಟ್ ಶಾಲೆಯ ಕರೆಸ್ಪಾಂಡೆಂಟ್ ಎಸ್.ಐ. ಮುನೀರ್ ಅಹ್ಮದ್ ಅವರು ಮಕ್ಕಳು ತಮ್ಮನ್ನು ಪರಿಸರ ಅಧ್ಯಯನದಲ್ಲಿ ತೊಡಗಿಸಿ ಉತ್ತಮ ಯೋಜನೆಗಳನ್ನು ರೂಪಿಸಬೇಕು ಎಂದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಂಟಿ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಈ ಸಮಾವೇಶವು ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಸಂಶೋಧನಾ ಪ್ರವೃತ್ತಿ ಬೆಳೆಸಲು ನೆರವಾಗಿದೆ ಎಂದರು.

ಸಮಾವೇಶದಲ್ಲಿ ಉತ್ತಮವಾಗಿ ಪ್ರಬಂಧ ಮಂಡಿಸಿದ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಸಿ.ಎಸ್. ಭೂಮಿಜಾ ಎಂಬ ವಿದ್ಯಾರ್ಥಿನಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದರು. ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಬೊಮ್ಮೇಗೌಡ ಹಾಗೂ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಜಿಮ್ಮಿ ಸಿಕ್ವೇರಾ ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ತೀರ್ಪುಗಾರರ ಪರವಾಗಿ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಜಿ. ಶ್ರೀನಾಥ್ ಕಿರಿಯ ವಿಜ್ಞಾನಿಗಳಿಗೆ ವೈಜ್ಞಾನಿಕ ಪ್ರಬಂಧವನ್ನು ಉತ್ತಮಪಡಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಸಮಾವೇಶದ ಶೈಕ್ಷಣಿಕ ಸಂಯೋಜಕ ಜಿ. ಶ್ರೀಹರ್ಷ ಫಲಿತಾಂಶ ಪ್ರಕಟಿಸಿದರು.

ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಬಿ.ಹೆಚ್. ಮಹಮ್ಮದ್ ಹನೀಫ್, ಪ್ರಾಂಶುಪಾಲರಾದ ತಲತ್ ಅಂಜುಮ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ವಿಜ್ಞಾನ ಪರಿಷತ್‍ನ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಡಿ. ಕೃಷ್ಣ ಚೈತನ್ಯ, ಡಿ.ಎಂ. ರೇವತಿ, ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್. ಸುರೇಶ್, ಶೈಕ್ಷಣಿಕ ಸಂಯೋಜಕ ಜಿ. ಶ್ರೀಹರ್ಷ, ಉಪನ್ಯಾಸಕ ಎಸ್.ಹೆಚ್. ಈಶ ಇತರರು ಇದ್ದರು.

ಪ್ರಾಂಶುಪಾಲರಾದ ತಲತ್ ಅಂಜುಮ್ ಸ್ವಾಗತಿಸಿದರು. ಶಿಕ್ಷಕ ಪಿ.ಎಸ್. ರವಿಕೃಷ್ಣ ವಂದಿಸಿದರು. ಸಿ.ಎಸ್. ಸುರೇಶ್ ನಿರ್ವಹಿಸಿದರು.