ಮಡಿಕೇರಿ, ಜು. 9 : ಡಿವೈಎಸ್‍ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ವಜಾಗೊಳಿಸಬೇಕೆಂದು ಒತ್ತಾಯಿಸಿರುವ ಜಿಲ್ಲಾ ಬಿಜೆಪಿ, ಗಣಪತಿ ಅವರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮನುಮುತ್ತಪ್ಪ, ರಾಜ್ಯ ಸರ್ಕಾರ ಗೂಂಡಾಗಿರಿಯ ಆಡಳಿತವನ್ನು ನಡೆಸುತ್ತಿದ್ದು, ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎಂದು ಆರೋಪಿಸಿದರು. ಆತ್ಮಹತ್ಯೆ ಮಾಡಿಕೊಂಡ ಕೋಣೆಯಲ್ಲಿ ಡೆತ್ ನೋಟ್ ಇರಲಿಲ್ಲವೆಂದು ಹೇಳಲಾಗುತ್ತಿದ್ದು, ಸ್ಥಳೀಯ ಪೊಲೀಸರ ಮೇಲೆ ಸಂಶಯ ವ್ಯಕ್ತವಾಗುತ್ತಿದೆ. ಕೋಣೆಯಲ್ಲಿ ಮಹಜರು ಮಾಡುವ ಸಂದರ್ಭ ಗಣಪತಿ ಅವರಿಗೆ ಅತ್ಯಂತ ಸಮೀಪದವರಾಗಿರುವ ಪತ್ನಿ ಹಾಗೂ ಮಕ್ಕಳಿಗೆ ವಿಷಯ ತಿಳಿಸದೆ ಕೇವಲ ತಮ್ಮ ಮತ್ತು ತಂದೆಗೆ ಮಾಹಿತಿ ನೀಡಲಾಗಿದೆ. ಇದರಿಂದಾಗಿ ಸ್ಥಳೀಯ ಪೊಲೀಸರ ಮೇಲೆ ಅನುಮಾನ ಮೂಡುತ್ತಿದೆ ಎಂದು ಮನುಮುತ್ತಪ್ಪ ಆರೋಪಿಸಿದರು.

ಗಣಪತಿ ಅವರ ಕುಟುಂಬದ ಮೇಲೆ ಹಿರಿಯ ಅಧಿಕಾರಿಗಳ ಒತ್ತಡವಿದ್ದು, ಇದೀಗ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೆ ಕಾರಣವೆಂದು ಹೇಳಿಕೆ ನೀಡಲಾಗುತ್ತಿದೆ. ಇದು ಪ್ರಕರಣವನ್ನು ಹಾದಿ ತಪ್ಪಿಸುವ ಯತ್ನವಾಗಿದ್ದು, ತಕ್ಷಣ ಸಚಿವ ಜಾರ್ಜ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ತಪ್ಪಿದ್ದಲ್ಲಿ ನ್ಯಾಯ ಸಿಗುವಲ್ಲಿಯವರೆಗೆ ಬಿಜೆಪಿ ಸುದೀರ್ಘ ಹೋರಾಟ ನಡೆಸಲಿದೆ ಎಂದರು.

ಜು.11 ರಂದು ವಿಧಾನಸಭೆಯಲ್ಲಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ವಿಚಾರವನ್ನು ಪ್ರಸ್ತಾಪಿಸಲಿರುವ ಜಿಲ್ಲೆಯ ಶಾಸಕರುಗಳಿಗೆ ಬೆಂಬಲವಾಗಿ ಕೊಡಗಿನ ಮೂರೂ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವದು. ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಲಾಗುವದೆಂದು ಮನುಮುತ್ತಪ್ಪ ತಿಳಿಸಿದರು. ಸಚಿವ ಕೆ.ಜೆ ಜಾರ್ಜ್ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಮನುಮುತ್ತಪ್ಪ ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಪ್ರ.ಕಾರ್ಯದರ್ಶಿ ಕಾಂತಿ ಸತೀಶ್, ಉಪಾಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿದರು.

ಇಂದು ಬಿಜೆಪಿ ಸಭೆ : ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಮಾತನಾಡಿ, ಜಿಲ್ಲಾ ಬಿಜೆಪಿಯ ಮೊದಲ ಕಾರ್ಯಕಾರಿಣಿ ಸಭೆ ಜು.10 ರಂದು ವೀರಾಜಪೇಟೆಯ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭ ತಿಳಿಸಿದರು. ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕ್ಷೇತ್ರದ ಸಂಸದರು ಹಾಗೂ ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಾಳನ ರವಿ ಉಪಸ್ಥಿತರಿದ್ದರು.