ವೀರಾಜಪೇಟೆ, ಆ. 25: ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿ ಜನ ಸಾಮಾನ್ಯರಿಗೆ ನೂತನ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವದು ಜನತೆಯ ಮೆಚ್ಚುಗೆಗೆ ಕಾರಣವಾಗಿದೆ ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಎಸ್. ಪೂವಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಜನಪರ ಕಾಳಜಿ ಹೊಂದಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ನಿರಂತರವಾಗಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇತ್ತೀಚೆಗಿನ ಸಮೀಕ್ಷೆ ಪ್ರಕಾರ ದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಅಭಿವೃದ್ಧಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸರ್ಕಾರದ ನಿರಂತರ ಯಶಸ್ಸನ್ನು ಸಹಿಸದ ಬಿಜೆಪಿ ಮುಖಂಡರು ವಿನಾ ಕಾರಣ ಆಧಾರ ರಹಿತ ಆರೋಪಗಳನ್ನು ಮಾಡುತ್ತಿರು ವದು ಅವರ ಘನತೆಗೆ ಶೋಭೆ ತರುವದಲ್ಲ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಮಾತನಾಡಿ, ಕೇಂದ್ರ ಸರ್ಕಾರವು ಕಾಫಿ ಬೆಳೆಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡು ತಿದ್ದುಪಡಿಗಳನ್ನು ಮಾಡಿ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಕೂಡಲೇ ಕಾಫಿ ಬೆಳೆಗಾರರನ್ನು ವಿಶ್ವಾಸಕ್ಕೆ ತೆಗದುಕೊಂಡು ವಿಸ್ತøತ ಚರ್ಚೆ ನಡೆಸಿ ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಕೈಗಾರಿ ಕೋದ್ಯಮಿಗಳು, ವಾಣಿಜ್ಯೋದ್ಯಮಿ ಗಳನ್ನು ಸೇರಿಸಿಕೊಂಡರೆ ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರ ಕಾಣುವದಿಲ್ಲ. ಕೇಂದ್ರ ಸರಕಾರ ಬೆಳೆಗಾರರ ಬಗ್ಗೆ ಇದೇ ವರ್ತನೆ ಮುಂದುವರೆಸಿದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವದು. ವೀಣಾ ಅಚ್ಚಯ್ಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿರುವದು ಜಿಲ್ಲೆಯ ಅಭಿವೃದ್ಧಿಗೆ ಬಲ ಬಂದಿದೆ ಎಂದರು.

ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಏಝಾಜ್ ಅಹಮದ್ ಮಾತನಾಡಿ, ಪ್ರೀತಿ-ವಿಶ್ವಾಸದಿಂದ ಬದುಕುತ್ತಿರುವ ಅಲ್ಪಸಂಖ್ಯಾತರಲ್ಲಿ ಒಡಕನ್ನು ಮೂಡಿಸಲು ಬಿಜೆಪಿ ಮುಖಂಡರು ಮೆರವಣಿಗೆಗಳನ್ನು ನಡೆಸಿ ಕೀಳುಮಟ್ಟದ ಪದಗಳನ್ನು ಬಳಸಿ ಅಶಾಂತಿಯನ್ನು ಮೂಡಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷರು ಗಳಾದ ಮಾಳೇಟಿರ ಬೋಪಣ್ಣ, ಮಾಳೇಟಿರ ಬೆಲ್ಲು ಬೋಪಯ್ಯ ಉಪಸ್ಥಿತರಿದ್ದರು.