ವೀರಾಜಪೇಟೆ, ಜ. 29: ಕಬಡ್ಡಿ ಪಂದ್ಯಾಟ ಭಾರತ ದೇಶದ ಪ್ರಾಚೀನ, ಗ್ರಾಮಾಂತರ ಪ್ರದೇಶದ ಕ್ರೀಡೆ. ಇಂದು ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ನಮ್ಮ ದೇಶದಲ್ಲಿಯೂ ಕಬಡ್ಡಿ ಅಗ್ರ ಸ್ಥಾನದಲ್ಲಿದೆ. ಭಾರತದ ಕಬಡ್ಡಿ ಫೆಡರೇಶನ್ ಐ.ಪಿ.ಎಲ್. ಮಾದರಿ ಯಲ್ಲಿ ನೀತಿ ನಿಯಮಾವಳಿಗಳನ್ನು ಅನುಸರಿಸಿ ಕಬಡ್ಡಿ ಕ್ರೀಡಾ ಪಟುಗಳನ್ನು ಆಯ್ಕೆ ಮಾಡುವದು ಕ್ರೀಡಾಪಟುಗಳಿಗೆ ನ್ಯಾಯ ಸಮ್ಮತವಾದ ಒಳಿತಾದರೂ ಈ ಆಯ್ಕೆ ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡಿ ವೈಜ್ಞಾನಿಕವಾಗಿ ಆಯ್ಕೆ ಪ್ರಕ್ರಿಯೆಯಾದರೆ ಮಾತ್ರ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ ಎಂದು ಸಮಾಜ ಸೇವಕರು ಹಾಗೂ ಜಾತ್ಯತೀತ ಜನತಾ ದಳದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.

ವೀರಾಜಪೇಟೆಯ ಟೀಂ ಡ್ಯೂಡ್ಸ್ ಸಂಸ್ಥೆಯ ವತಿಯಿಂದ ಇಲ್ಲಿನ ತಾಲೂಕು ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಕ್ರಾಂತಿ ದಳದ ಬೊಮ್ಮನ ಹಳ್ಳಿ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಕೆ.ಸಿ. ಪವಿತ್ರ ಮಾತನಾಡಿ ಕಬಡ್ಡಿ ಇತರ ಪಂದ್ಯಗಳಂತೆ ಸಮಕಾಲೀನ ಪಂದ್ಯವಾಗಿದ್ದು ಇಂತಹ ಪಂದ್ಯಾಟ ಗಳನ್ನು ಸಂಘಟನೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಆಯೋಜಿಸಿ ಉತ್ತೇಜನ ನೀಡುವದು ಉತ್ತಮ ಕೆಲಸವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಬೆಂಗಳೂರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಗೋವಿಂದರಾಜು, ಪತ್ರಕರ್ತ ಡಿ.ಎಂ. ರಾಜ್‍ಕುಮಾರ್, ಸಮಾಜ ಸೇವಾಕರ್ತೆ ಸೀತಮ್ಮ ಭಾಗವಹಿಸಿದ್ದರು.

ಟೀಂ ಡ್ಯೂಡ್ಸ್ ಸಂಘಟನೆ ಅಧ್ಯಕ್ಷ ಲಕ್ಷ್ಮೀಶ್, ಹೇಮಂತ್, ವಿನೋದ್ ಇತರ ಪದಾಧಿಕಾರಿಗಳು ಹಾಜರಿದ್ದರು.