ಸೋಮವಾರಪೇಟೆ, ಡಿ. 23: ಕರ್ನಾಟಕ ಕಾವಲು ಪಡೆಯ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಆದರ್ಶ ಶಿಕ್ಷಕ-ಶಿಕ್ಷಕಿ ಪ್ರಶಸ್ತಿಗೆ ಪ್ರಸಕ್ತ ವರ್ಷ ಕೊಡಗು ಜಿಲ್ಲೆಯಿಂದ ಒಟ್ಟು 17 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ತಾ. 25 ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವದು ಎಂದು ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾವಲು ಪಡೆ ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇದರೊಂದಿಗೆ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರನ್ನೂ ಗುರುತಿಸುತ್ತಾ ಬಂದಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯಿಂದ ಒಟ್ಟು 17 ಮಂದಿ ಶಿಕ್ಷಕರನ್ನು ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮ ತಾ. 25ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶ್ವ ವಿದ್ಯಾಲಯದ ಕುಲಪತಿ ಶಿವಲಿಂಗಯ್ಯ, ಕಾವಲುಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್‍ಕುಮಾರ್ ಗೌಡ, ಕವಯತ್ರಿ ಡಾ. ಲತಾ ರಾಜಶೇಖರ್, ದ.ಕ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಕೊಡಗು ಜಿಲ್ಲೆಯಿಂದ ಕುಶಾಲನಗರ ಪ.ಪೂ. ಕಾಲೇಜಿನ ಅತಿಥಿ ಉಪನ್ಯಾಸಕ ಟಿ.ಎಲ್. ತ್ಯಾಗರಾಜ್, ಸೋಮವಾರಪೇಟೆಯ ಸಂತ ಜೋಸೆಫರ ಕಾಲೇಜಿನ ಕೆ.ಆರ್. ಜ್ಯೋತಿ, ಕುಶಾಲನಗರ ಕನ್ನಡ ಭಾರತಿ ಕಾಲೇಜಿನ ರುದ್ರೇಶಾಚಾರ್, ಸರ್ಕಾರಿ ಪ್ರೌಢಶಾಲೆಯ ಉ.ರಾ. ನಾಗೇಶ್, ವೀರಾಜಪೇಟೆ ಹೈಸೊಡ್ಲೂರು ಶಾಲೆಯ ಹೆಚ್.ಸಿ. ಆಶಾ, ದೇವನೂರಿನ ಪಿ.ಜಿ. ಜಾನಕಿ, ಚೂರಿಕಾಡಿನ ಬಿ.ಕೆ. ಜಯಲಕ್ಷ್ಮೀ, ಮಡಿಕೇರಿಯ ವಾಟೆಕಾಡು ಶಾಲೆಯ ಟಿ.ಬಿ. ಕುಮಾರ್ ಅವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ತಾವೂರಿನ ಪೂರ್ಣಿಮಾ, ಭಾಗಮಂಡಲದ ಎನ್.ಕೆ. ಪ್ರಭು, ಕುಶಾಲನಗರದ ಸಿ.ಕೆ. ಭಾರತಿ, ತಿತಿಮತಿಯ ಬಿ.ಬಿ. ಸ್ವಾತಿ, ವೀರಾಜಪೇಟೆಯ ದಮಯಂತಿ, ಅರಮೇರಿಯ ಎಂ.ಕೆ. ನಳಿನಾಕ್ಷಿ, ಸೂರ್ಲಬ್ಬಿಯ ಪಿ. ಸೆಮಿಯ, ಸೋಮವಾರಪೇಟೆಯ ರೋಹಿಣಿ, ಮಡಿಕೇರಿಯ ಇಂದಿರಾವತಿ ಅವರುಗಳಿಗೆ ಪ್ರಶಸ್ತಿ ವಿತರಿಸಲಾಗುವದು ಎಂದರು.
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರು ತಾ. 25ರಂದು ಬೆಳಿಗ್ಗೆ 10 ಗಂಟೆಯ ಒಳಗೆ ಮೈಸೂರಿನ ಮಾನಸ ಗಂಗೋತ್ರಿ ಸಭಾಂಗಣದಲ್ಲಿ ಹಾಜರಿರಬೇಕು ಎಂದರು. ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಹೆಚ್.ಹೆಚ್. ಕುಮಾರ್, ತಾಲೂಕು ಅಧ್ಯಕ್ಷ ಶೇಷಪ್ಪ, ಕಾರ್ಯದರ್ಶಿ ರವಿ ಅವರುಗಳು ಉಪಸ್ಥಿತರಿದ್ದರು.