ಕುಶಾಲನಗರ, ಜು. 14: ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್‍ಸಿಂಹ ಹೇಳಿದ್ದಾರೆ. ಅವರು ಕೊಡಗು ಬಂದ್ ಸಂದರ್ಭ ಕುಶಾಲನಗರದ ಬಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದ ಅವರು, ಜಾರ್ಜ್ ಅಪರಾಧಿ ಅಲ್ಲ ಎಂದು ದೃಢಪಟ್ಟಲ್ಲಿ ಮುಂದೆ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಡಲಿ ಎಂದು ಹೇಳಿದರು.
ರಾಜ್ಯದ ವಿವಿಧೆಡೆ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಸರಣಿ ನಡೆಯುತ್ತಿದ್ದು, ಪೊಲೀಸರಿಗೆ ಸರಕಾರದ ಮೇಲೆ ವಿಶ್ವಾಸದ ಕೊರತೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಂತನೆ ಹರಿಸಬೇಕಾಗಿದೆ ಎಂದರು.
ಪ್ರಸಕ್ತ ರಾಜ್ಯ ಸರಕಾರದಲ್ಲಿ ತನಿಖೆಗೆ ಸೂಕ್ತ ವಾತಾವರಣ ಕಂಡುಬರುತ್ತಿಲ್ಲ. ಸರಕಾರವೂ ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದ ಪ್ರತಾಪ್‍ಸಿಂಹ, ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆಗೆ ವಾಗ್ದಾನ ಮಾಡುವ ಬದಲು ಮುಖ್ಯಮಂತ್ರಿಗಳು ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ ಎಂದರು.
ಡಿವೈಎಸ್ಪಿ ಗಣಪತಿ ಅವರು ಸಾವಿಗೆ ಮುನ್ನ ಮಾಧ್ಯಮದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಆದರೆ ಗೃಹ ಇಲಾಖೆಯಲ್ಲಿ ಸಚಿವರು ಮೂಗು ತೂರಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯ ದೊರಕುವದು ಅಸಾಧ್ಯ ಎಂದರು. ಸಚಿವ ಸ್ಥಾನದಿಂದ ತಕ್ಷಣ ಕೆ.ಜೆ. ಜಾರ್ಜ್ ಅವರನ್ನು ವಜಾಗೊಳಿಸಿ ಡಿವೈಎಸ್ಪಿ ಗಣಪತಿ ಕುಟುಂಬಕ್ಕೆ ನ್ಯಾಯ ನೀಡಬೇಕಾಗಿದೆ ಎಂದರು.