ಮಡಿಕೇರಿ, ನ. 18: ಇತ್ತೀಚೆಗೆ ಐಗೂರಿನ ಮಸೀದಿಯಲ್ಲಿ ಪವಿತ್ರ ಕುರ್‍ಆನ್‍ಗೆ ಬೆಂಕಿ ಹಚ್ಚಿದ ಪ್ರಕರಣ ಕೋಮು ಗಲಭೆಗಾಗಿ ಸೃಷ್ಟಿಸಿದ ಷಡ್ಯಂತ್ರವಾಗಿದೆಯೆಂದು ಆರೋಪಿಸಿರುವ ಕುಶಾಲನಗರ ಹೋಬಳಿ ಅಹಿಂದ ಒಕ್ಕೂಟ, ಕೋಮುವಾದಿಗಳನ್ನು ತಕ್ಷಣ ಬಂಧಿಸಿ, ಶಿಕ್ಷಗೆ ಗುರಿಪಡಿಸಬೇಕೆಂದು ಒತ್ತಾಯಿಸಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ.ಕೆ. ಹಮೀದ್, ಜಿಲ್ಲೆಯಲ್ಲಿ ಅಶಾಂತಿಯನ್ನು ಮೂಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಹೊಂಚು ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಪೊಲೀಸರು ಯಾವದೇ ಒತ್ತಡಕ್ಕೆ ಮಣಿಯದೆ ಐಗೂರು ಮಸೀದಿಯಲ್ಲಿ ದುಷ್ಕøತ್ಯ ನಡೆಸಿದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಮುಸಲ್ಮಾನರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಲು ಪೊಲೀಸ್ ಇಲಾಖೆÉ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.

ಉಪಾಧ್ಯಕ್ಷೆ ರಾಧಾ ಪುಟ್ಟರಾಜು ಮಾತನಾಡಿ, ಯಾವದೇ ಧರ್ಮದ ಗ್ರಂಥವನ್ನು ಸುಡುವ ಅಧಿಕಾರವನ್ನು ಯಾರಿಗೂ ನೀಡಿರುವದಿಲ್ಲ. ಆದರೆ, ಸಮಾಜದಲ್ಲಿ ಒಡಕನ್ನು ಮೂಡಿಸಿ ಲಾಭ ಪಡೆಯಲು ಹುನ್ನಾರ ನಡೆಯುತ್ತಿದ್ದು, ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸದಸ್ಯೆ ಸುನಂದ ಮಾತನಾಡಿ, ಜಿಲ್ಲೆಯಲ್ಲಿ ಹಿಂದೂ ಹಾಗೂ ಮುಸಲ್ಮಾನರು ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದು, ಈ ಸೌಹಾರ್ದತೆಯನ್ನು ಕದಡುವ ಯತ್ನ ವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಘಟನಾವಳಿಗಳಿಗೆ ಮೂಲ ಕಾರಣಕರ್ತರಾದವರನ್ನು ತನಿಖೆ ಮೂಲಕ ಕಂಡು ಹಿಡಿದು ಬಂಧಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸದಸ್ಯರಾದ ಕೆ.ಹೆಚ್. ಹಬೀಬ್, ಕಾರ್ಯದರ್ಶಿ ಅಬ್ದುಲ್ ಅಜೀಜ್ ಹಾಗೂ ಚಂದ್ರ ಉಪಸ್ಥಿತರಿದ್ದರು.