ಸೋಮವಾರಪೇಟೆ, ಸೆ. 10: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಾಗಡಿಕಟ್ಟೆ ಅಯ್ಯಪ್ಪ ಕಾಲೋನಿಯಲ್ಲಿ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ಗುಂಡಿಗಳಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು, ವಾತಾವರಣ ಗಬ್ಬೆದ್ದು ನಾರುತ್ತಿರುವ ಹಿನ್ನೆಲೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.ಅಯ್ಯಪ್ಪ ಕಾಲೋನಿ ಹಲವು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವದೇ ಸ್ಪಂದನ ದೊರೆತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಾಲೋನಿಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲಾ ವರ್ಗದ ಜನರು ವಾಸಿಸುತ್ತಿದ್ದು, ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳೇ ಆಗಿವೆ. ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಇರುವದರಿಂದ ಮನೆಗಳ ಶೌಚಾಲಯ ನೀರು ಸೇರಿದಂತೆ ಇನ್ನಿತರ ತ್ಯಾಜ್ಯಗಳ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಅಲ್ಲಿನ ಜನರು ಮೂಗು ಮುಚ್ಚಿಕೊಂಡು ನಡೆದಾಡುವಂತಹ ದುಸ್ಥಿತಿ ಒದಗಿದೆ.

ರಸ್ತೆಯ ಬದಿಯಲ್ಲೆಲ್ಲ ಮಲೀನವಾದ ನೀರು ಅಲ್ಲಲ್ಲಿ ಸಂಗ್ರಹವಾಗಿದ್ದು, ಸೊಳ್ಳೆಗಳ ಉತ್ಪತಿ ಕೇಂದ್ರವಾಗಿದೆ. ಅಶುಚಿತ್ವದಿಂದ ಕೂಡಿದ ಕಾಲೋನಿಯಲ್ಲಿನ ಅನೇಕ ಮಂದಿ ವಯಸ್ಸಾದವರು ಹಾಗೂ ಕೆಲ ಮಕ್ಕಳು ಜ್ವರ-ಶೀತ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಂದ ಈಗಾಗಲೇ ನರಳುತ್ತಿದ್ದು, ಇದು ವ್ಯಾಪಕಗೊಳ್ಳುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ 20 ಮಕ್ಕಳಿದ್ದು, ಇಲ್ಲಿಗೆ ತೆರಳಲೂ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಚೌಡ್ಲು ಗ್ರಾಮ ಪಂಚಾಯಿತಿಗೆ ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನ ವಾಗುತ್ತಿಲ್ಲ. ವರ್ಷಕ್ಕೆ ಐವತ್ತು ಸಾವಿರ ಅನುದಾನ ನೀಡಿದರೆ ಸಮಸ್ಯೆ ಬಗೆಹರಿಯುವದೇ? ಕಾಲೋನಿಯ ಅಭಿವೃದ್ಧಿ ಸಾಧ್ಯವೆ? ಎಂದು ಆನಂದ ಅವರು ಪ್ರಶ್ನಿಸಿದ್ದಾರೆ. ಕಾಲೋನಿ ಯಲ್ಲಿ ಚರಂಡಿ ವ್ಯವಸ್ಥೆಯಾಗಬೇಕು. ರಸ್ತೆ ಸರಿಪಡಿಸಬೇಕು. ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೀರಿನ ಟ್ಯಾಂಕ್ ಪಾಳುಬಿದ್ದಿದೆ. ಚುನಾವಣೆ ಸಂದರ್ಭ ಜನಪ್ರತಿನಿಧಿಗಳು ಮತ ಭಿಕ್ಷೆಗಾಗಿ ಬರುತ್ತಾರೆ. ಆದರೆ ಚರಂಡಿ ನಿರ್ಮಾಣಕ್ಕೆ ಅನುದಾನ ಕಲ್ಪಿಸಲು ಇವರಿಗೆ ಸಾಧ್ಯವಾಗಿಲ್ಲ. ಕೂಲಿ ಕಾರ್ಮಿಕರೆಂದರೆ ಇಷ್ಟೊಂದು ತಾತ್ಸಾರವೇ? ಕೇವಲ ಮತಗಳಿಗೆ ಮಾತ್ರ ನಾವುಗಳು ಬೇಕಾ? ಎಂದು ಪ್ರಶ್ನಿಸಿರುವ ಸ್ಥಳೀಯರಾದ ಕೆ.ಕೆ. ರಘು, ಕೆ.ಬಿ. ರಮೇಶ್ ಸೇರಿದಂತೆ ಇತರರು, ತಕ್ಷಣ ಪಂಚಾಯಿತಿ ಈ ಬಗ್ಗೆ ಗಮನಹರಿಸಬೇಕು. ತಪ್ಪಿದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದ್ದಾರೆ.