ಸೋಮವಾರಪೇಟೆ, ಡಿ. 16: ಕಳೆದ ಅನೇಕ ವರ್ಷಗಳಿಂದ ಗ್ರಾಮಸ್ಥರ ಬಹುಬೇಡಿಕೆಯಾಗಿದ್ದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಣಗೂರುಕೊಪ್ಪ ಗ್ರಾಮ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಇದೀಗ ಕಾಲಕೂಡಿ ಬಂದಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಹಾಗೂ ತಾ.ಪಂ. ಸದಸ್ಯ ಧರ್ಮಪ್ಪ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತೋಳೂರು ಶೆಟ್ಟಳ್ಳಿ ಭಾಗದಲ್ಲಿ ಅನೇಕ ರಸ್ತೆಗಳು ದುಸ್ಥಿತಿಯಲ್ಲಿದ್ದು, ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವದು ಎಂದರು. ತಾ.ಪಂ. ಸದಸ್ಯ ಧರ್ಮಪ್ಪ ಮಾತನಾಡಿ, ಕಾಮಗಾರಿಗಳು ನಡೆಯುವ ಸಂದರ್ಭ ಖುದ್ದು ಗ್ರಾಮಸ್ಥರೇ ಹಾಜರಿದ್ದು, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಭಾರತಿ, ಸದಸ್ಯರಾದ ಪ್ರದೀಪ್, ರೇಖಾ ತಿಮ್ಮಯ್ಯ, ಮಾಜಿ ಸದಸ್ಯ ಕುಶಾಲಪ್ಪ, ಹರೀಶ್, ಪ್ರಮುಖರಾದ ಸುಧಾಕರ್ ಕೆ.ಕೆ., ಯೋಗೇಂದ್ರ, ಸುರೇಶ್, ಉಮೇಶ್, ಅಮೃತ ಸೇರಿದಂತೆ ಇತರರು ಉಪಸ್ಥಿತರಿದ್ದರು.