ಕೂಡಿಗೆ, ಅ. 27: ಕೂಡಿಗೆ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಒಳಪಡುವ ಹುದುಗೂರು ಹಾರಂಗಿ ರಸ್ತೆ ಕಳೆದ ಅನೇಕ ವರ್ಷಗಳಿಂದ ತೀರಾ ಹಾಳಾಗಿದ್ದು, ದ್ವಿಚಕ್ರ ವಾಹನಗಳೂ ಚಲಿಸಲು ಆಗದಂತಹ ಸ್ಥಿತಿಯಾಗಿತ್ತು. ದಿನಂಪ್ರತಿ ಸೋಮವಾರಪೇಟೆ ಮಾರ್ಗದಿಂದ ಅನೇಕ ಪ್ರವಾಸಿಗರು ಹಾರಂಗಿಯತ್ತ ತೆರಳುವ ಮುಖ್ಯರಸ್ತೆಯಾಗಿದ್ದ ಹುದುಗೂರು ಹಾರಂಗಿ ರಸ್ತೆಯು ಕಲ್ಲಿನಿಂದ ಅರೆಯಲ್ಪಟ್ಟಿದ್ದು, ಇದೀಗ ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ. 40 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ರಸ್ತೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜಿಲ್ಲೆಯಲ್ಲಿ ಈ ಸಾಲಿನಲ್ಲಿ ವಿವಿಧ ಯೋಜನೆಗಳ ಮೂಲಕ ಹಾಗೂ ಅನುದಾನದ ಹಣದಲ್ಲಿ ಹೆಚ್ಚು ರಸ್ತೆಗಳ ನಿರ್ಮಾಣಗೊಳಿಸಲಾಗುತ್ತಿದೆ. ಸಾರ್ವಜನಿಕರಿಗೆ ಸದುಪಯೋಗವಾಗುವ ರೀತಿಯಲ್ಲಿ ಅನುದಾನದ ಹಣವನ್ನು ಹಂತ ಹಂತವಾಗಿ ವಿನಿಯೋಗಿಸಿ ಪ್ರಾಮುಖ್ಯತೆಯುಳ್ಳ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅದೇ ಮಾದರಿಯಲ್ಲಿ ಹಾರಂಗಿ ಹುದುಗೂರು ರಸ್ತೆಯ ಸಂಪರ್ಕ ಹಾರಂಗಿ ಬೃಂದಾವನ ಮತ್ತು ಅಣೆಕಟ್ಟು ವೀಕ್ಷಣೆಗೆ ಪ್ರವಾಸಿಗರಿಗೆ ಅತಿ ಮುಖ್ಯವಾದ ಸಂಪರ್ಕದ ರಸ್ತೆಯಾಗಿದ್ದು, ಇದರ ಕಾಮಗಾರಿಯು ಉತ್ತಮ ಗುಣಮಟ್ಟದಲ್ಲಿ ಸಾಗಲು ಸಾರ್ವಜನಿಕರ ಸಹಕಾರವೂ ಮುಖ್ಯವಾಗಿರುತ್ತದೆ. ಇನ್ನುಳಿದ ರಸ್ತೆ ಕಾಮಗಾರಿಗಳನ್ನು ಈ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗುವದು ಎಂದರು.
ಇದೇ ವೇಳೆ ಇನ್ನುಳಿದ ಗ್ರಾಮದ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರೈಸುವಂತೆ ಶಾಸಕರಿಗೆ ಗ್ರಾಮಸ್ಥರು ಮನವಿ ನೀಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ರಾಮಲಿಂಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಸದಸ್ಯ ರವಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಬಾಸ್ಕರ್, ಹುದುಗೂರು ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚಾಮಿ, ಯಡವನಾಡು ರಮೇಶ್, ಟಿ.ಪಿ. ಪೂವಯ್ಯ, ಗುತ್ತಿಗೆದಾರ ಪ್ರಸಾದ್ ರೈ ಹಾಜರಿದ್ದರು.