ಸೋಮವಾರಪೇಟೆ, ನ. 5: ಲೋಕೋಪಯೋಗಿ ಇಲಾಖಾ ವತಿಯಿಂದ ಕೈಗೊಳ್ಳಲಾದ ರಸ್ತೆ ಕಾಮಗಾರಿಯಲ್ಲಿ ಕಳಪೆ ಕೆಲಸ ಸಾಬೀತಾಗಿರುವ ಹಿನ್ನೆಲೆ ಸಂಬಂಧಿತ ಅಭಿಯಂತರರ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಕೆಯಾಗಿದೆ.

ಕಳೆದ 2012-13ರ ಸಾಲಿನಲ್ಲಿ ಯಡೂರು, ಮಾವಿನಕಟ್ಟೆ, ಬಾರ್ಲಗದ್ದೆ, ಹರಗ ರಸ್ತೆಯನ್ನು ಡಾಂಬರೀಕರಣ ಮಾಡಲು ಲೋಕೋಪಯೋಗಿ ಇಲಾಖಾ ಮೂಲಕ ಅನುದಾನ ಬಿಡುಗಡೆ ಗೊಂಡು, ಅದರಂತೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ್ದರು. ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಅವರ ಸಲಹೆಯ ಮೇರೆ ಪ್ರಕಾಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ದೂರಿನ ಮೇರೆ ಬೆಂಗಳೂರಿನಿಂದ ಲೋಕಾಯುಕ್ತ ಅಭಿಯಂತರ ಶ್ರೀಕಾಂತ್ ಅವರ ತಂಡ ಹರಗ ಗ್ರಾಮಕ್ಕೆ ಆಗಮಿಸಿ ರಸ್ತೆಯನ್ನು ಪರಿಶೀಲನೆ ನಡೆಸಿದ್ದರು. ರಸ್ತೆಯ ಆಯ್ದ ಭಾಗಗಳಿಂದ ‘ಮಾದರಿ’ ಪಡೆದು ಬೆಂಗಳೂರಿನಲ್ಲಿ ಹೆಚ್ಚಿನ ತಪಾಸಣೆಗೆ ಒಳಪಡಿಸಿದ್ದರು.

ಅದರಂತೆ ಸಾಮಗ್ರಿ ಮತ್ತು ಐಟಂಗಳ ಅನುಷ್ಠಾನದಲ್ಲಿ ಕೊರತೆ ಕಂಡುಬಂದಿದ್ದು, ಅಭಿಯಂತರರು ಕರ್ತವ್ಯದಲ್ಲಿ ಸಂಪೂರ್ಣ ನಿಷ್ಠೆ ತೋರಿಸಿಲ್ಲ. ಇದರಿಂದಾಗಿ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ರಸ್ತೆಗೆ ವಿನಿಯೋಗಿಸಿದ 7,45,539 ರೂಪಾಯಿಗಳಿಗೆ ಇಂಜಿನಿಯರ್‍ಗಳೇ ಹೊಣೆ ಎಂದು ಲೋಕಾಯುಕ್ತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಇದರಿಂದ ಅಂದಿನ ಇಇ ದೊಡ್ಡಸಿದ್ದಯ್ಯ ಅವರು 1,86,384, ಎಇಇ ರಾಮಕೃಷ್ಣ ಅವರನ್ನು ರೂ. 2,39,789, ಎಇಇ ಲಿಂಗರಾಜು ಅವರು 1,39,789, ಭಾಸ್ಕರ್ ಅವರು 2,79,577 ರೂಪಾಯಿಗಳಿಗೆ ಹೊಣೆಗಾರರನ್ನಾಗಿಸಿ ವರದಿ ಸಲ್ಲಿಕೆಯಾಗಿದ್ದು, ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಈ ವರದಿಯ ವಿರುದ್ಧ ಅಭಿಯಂತರರಿಗೆ ಆಕ್ಷೇಪಣೆ ಸಲ್ಲಿಸಲೂ ಅವಕಾಶ ಕಲ್ಪಿಸಲಾಗಿದೆ.

ದೂರು ಪ್ರಕರಣದ ಹಿನ್ನೆಲೆ: ಶಾಂತಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಹರಗ ಗ್ರಾಮದಲ್ಲಿ ಕೈಗೊಂಡಿರುವ ಯಡೂರು ಮಾವಿನಕಟ್ಟೆ- ಬಾರ್ಲಗದ್ದೆ- ಹರಗ- ಕಿಕ್ಕರಳ್ಳಿ ಸಂಪರ್ಕಿಸುವ 2.50 ಕಿ.ಮೀ. ರಸ್ತೆಯನ್ನು ಕಳೆದ 2013ರಲ್ಲಿ ಕೈಗೊಳ್ಳಲಾಗಿದ್ದು, ಕ್ರಿಯಾ ಯೋಜನೆ ಯಂತೆ ಕಾಮಗಾರಿ ನಡೆಸದೇ ಕಳಪೆ ಮಾಡಲಾಗಿದೆ ಎಂದು ಗ್ರಾಮಸ್ಥರಾದ ಪ್ರಕಾಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ದೂರನ್ನು ಸ್ವೀಕರಿಸಿದ ಲೋಕಾ ಯುಕ್ತ ಸಂಸ್ಥೆಯ ತನಿಖಾಧಿಕಾರಿ ಶ್ರೀಕಾಂತ್, ಗುಣಮಟ್ಟ ನಿಯಂತ್ರಣಾಧಿ ಕಾರಿ ವೆಂಕಟೇಶ್ ನರಗುಂದ, ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ. ಜಯಪ್ರಕಾಶ್ ಅವರುಗಳು ಕಳೆದ ತಾ. 26.08.2015 ರಂದು ಹರಗ ಗ್ರಾಮಕ್ಕೆ ಆಗಮಿಸಿ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಹರಗ ಗ್ರಾಮದ 6.5 ರಸ್ತೆಯಿಂದ 9 ಕಿ.ಮೀ.ವರೆಗೆ ಕೈಗೊಳ್ಳಲಾಗಿರುವ ಎರಡೂವರೆ ಕಿ.ಮೀ. ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಆಹ್ವಾನಿಸಲಾಗಿದ್ದು, ಇದರಲ್ಲಿ ಬೆಂಗಳೂರಿನ ವಸಂತ್ ಎಂಬವರು ಗುತ್ತಿಗೆ ಪಡೆದಿದ್ದರು. ನಂತರ ಉದಯ ಅವರಿಗೆ ತುಂಡು ಗುತ್ತಿಗೆ ನೀಡಿ ಕಾಮಗಾರಿಯನ್ನು ಪೂರ್ಣಗೊಳಿ ಸಲಾಗಿತ್ತು. ಸರ್ಕಾರದಿಂದ 28,72,758 ರೂ. ಪಾವತಿಸಲಾಗಿತ್ತು. ಆದರೆ ಕಾಮಗಾರಿ ಕಳಪೆಯಾದ ಪರಿಣಾಮ ನಿರ್ಮಾಣವಾದ ಕೇವಲ 1 ವರ್ಷದಲ್ಲೇ ರಸ್ತೆಯಲ್ಲಿ ಡಾಮರು ಕಿತ್ತು ಬಂದು ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾದವು. ಈ ಹಿನ್ನೆಲೆ ಕಾಮಗಾರಿ ನಿರ್ವಹಿಸುವ ಸಂದರ್ಭ ಗುಣಮಟ್ಟಕ್ಕೆ ಆದ್ಯತೆ ನೀಡಿಲ್ಲ ಎಂಬ ದೂರು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿತ್ತು.

- ವಿಜಯ್ ಹಾನಗಲ್