ಮಡಿಕೇರಿ, ಜೂ. 30: ಹಾಕತ್ತೂರು ಗ್ರಾಮದ ಮಸೀದಿ ಬಳಿಯಲ್ಲಿ ಮಣ್ಣು ಕುಸಿದು ಸಂಚಾರಕ್ಕೆ ತೊಡಕುಂಟಾಗಿದ್ದು, ಇದನ್ನು ಮುಂದಿನ 15 ದಿನಗಳ ಒಳಗಾಗಿ ದುರಸ್ತಿ ಪಡಿಸಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆ ತಡೆ ನಡೆಸುವದಾಗಿ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಕೇರಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್, ಕಳೆÉದ ಮೂರು ವರ್ಷಗಳಿಂದ ಹಾಕತ್ತೂರು ಮಸೀದಿ ಬಳಿಯಲ್ಲಿ ಮಣ್ಣು ಕುಸಿತದಿಂದ ಸಂಚಾರಕ್ಕೆ ತೊಡಕುಂಟಾಗುವ ಘÀಟನೆ ಗಳು ನಡೆಯುತ್ತಿದೆ. ಮಗುವೊಂದು ಸೇರಿದಂತೆ ನಾಲ್ಕು ಮಂದಿ ಅವಘಡಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಈ ಹಿಂದೆ ನಡೆದಿದೆ.

ವೀರಾಜಪೇಟೆಗೆ ತೆರಳುವ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿರುವದರಿಂದ ಗ್ರಾ.ಪಂ.ಯಿಂದ ರಸ್ತೆಯ ದುರಸ್ತಿ ಕಾರ್ಯವನ್ನು ನಡೆಸಲಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ. ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟು, ರಸ್ತೆ ದುರಸ್ತಿ ಪಡಿಸುವಂತೆ ಮನವಿ ಮಾಡಲಾಗಿದ್ದರೂ ಸ್ಪಂದಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆಯ ಮೇಲ್ಭಾಗ ಕುಸಿದಿರುವದರಿಂದ ರಸ್ತೆಯ ಬದಿಯಲ್ಲಿ ನೀರು ತುಂಬಿಕೊಂಡು ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಇದರಿಂದ ರೋಗ-ರುಜಿನಗಳು ಹರಡುವ ಸಾಧ್ಯತೆಯೂ ಇದೆ ಎಂದು ಅಬ್ದುಲ್ ಖಾದರ್ ಆತಂಕ ವ್ಯಕ್ತಪಡಿಸಿದರು. ಕಳೆದ ಹದಿನೈದು ದಿನಗಳಿಂದ ಈ ವಿಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲೆ ಆವರಿಸಿದೆ. ತಕ್ಷಣ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಗ್ರಾಮಸ್ಥರ ಸಹಕಾರದಿಂದ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಮುತ್ತಲಿಬ್, ನಿಜಾಮುದ್ದೀನ್, ಶರಾಫತ್, ಸೈಯ್ಯದ್ ಹಾಗೂ ಫಯಾಜ್ ಉಪಸ್ಥಿತರಿದ್ದರು.