ಮಡಿಕೇರಿ, ಸೆ. 1: ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಹೋಬಳಿ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಮಾಳೇಟ್ಟಿರ ನವೀನ್ ಕಾರ್ಯಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಸಾಹಿತ್ಯ ಪರಿಷತ್ ಮಾಡುವ ಕನ್ನಡ ಪರ ಚಟುವಟಿಕೆಗಳಿಗೆ ಎಲ್ಲರೂ ಮುಕ್ತ ಮನಸ್ಸಿನ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು. ಆ ಬಳಿಕ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹೋಬಳಿ ವ್ಯಾಪ್ತಿಯ 6 ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ವಿತರಿಸಿದರು. ಆ ಬಳಿಕ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳುವ ಚಟುವಟಿಕೆಗಳು ಕನ್ನಡದಿಂದ ಕನ್ನಡಿಗರು ವಿಮುಖವಾಗುತ್ತಿರುವ ಈ ಸಂದರ್ಭದಲ್ಲಿ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಗಿವೆ. ನಾವು ಆಂಗ್ಲ ಭಾಷೆಯ ಕುರಿತಾದ ಅಂಧಾಭಿಮಾನವನ್ನು ತೊರೆಯ ಬೇಕು. ಕನ್ನಡ ಒಂದು ಪರಿಪೂರ್ಣ ಭಾಷೆ ಎಂಬದನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಪಿ.ಎಸ್. ರವಿಕೃಷ್ಣ ರಸಪ್ರಶ್ನೆಯನ್ನು ನಿರ್ವಹಿಸಿದರು. ಹೋಬಳಿ ಘಟಕದ ಅಬೂಬಕರ್ ಸ್ವಾಗತಿಸಿ ಸಹ ಕಾರ್ಯದರ್ಶಿ ರಾಜೇಶ್ವರಿ ಶಿವಾನಂದ್ ನಿರೂಪಿಸಿದರು. ಕಾರ್ಯದರ್ಶಿ ಎಸ್. ಮಹೇಶ್ ವಂದಿಸಿದರು.
ಫಲಿತಾಂಶ
ಪ್ರಥಮ ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಎಸ್. ಬಿಮಲ್, ಬಿ.ಎ. ಸಿಂಧು ತಂಡ, ದ್ವಿತೀಯ ಹಾಕತ್ತೂರು ಪ್ರೌಢಶಾಲೆಯ ಚೇತನ್ ಹಾಗೂ ಅರ್ಚನ ತಂಡ, ತೃತೀಯ ಮೂರ್ನಾಡು ಪ್ರೌಢಶಾಲೆಯ ಪಿ.ಪಿ. ಪವನ್ ಹಾಗೂ ಬಿ.ಎಲ್. ಕವನ್ ತಂಡ.