ಮಾನ್ಯರೆ,

ನಮ್ಮ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸರು ಪ್ರತಿಭಟನೆ ಮಾಡಲು ನಿರ್ಧರಿಸಿ ಬೀದಿಗೆ ಇಳಿಯಲು ಇದೇ ಜೂನ್ 4 ರಂದು ಮಾಡಿದ ಪ್ರಯತ್ನವನ್ನು ಸರಕಾರ ವ್ಯವಸ್ಥಿತ ರೀತಿಯಲ್ಲಿ ತಡೆಹಿಡಿಯಲು ಸಫಲವಾಯಿತು.

ಪೊಲೀಸರು ಪ್ರತಿಭಟನೆ ಮಾಡಲು ಸರಕಾರವೇ ಕಾರಣ. ಆ ಇಲಾಖೆಯಲ್ಲಿ ನಾವು ಹಿಂದೆಂದಿಗೂ ಕಾಣದ ಅವ್ಯವಸ್ಥೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಪೇದೆಗಳು ಮತ್ತು ಕೆಳಮಟ್ಟದ ಅಧಿಕಾರಿಗಳು ರೋಸಿ ಹೋಗಿದ್ದಾರೆ. ಈ ಪರಿಸ್ಥಿತಿಯನ್ನು ರಾಜಕಾರಣಿಗಳು ಮತ್ತು ಇಲಾಖೆಯ ಮೇಲಧಿಕಾರಿಗಳು ಸೃಷ್ಟಿ ಮಾಡಿದ್ದಾರೆ. ಕರ್ನಾಟಕದಲ್ಲಿ ಯಾವದೇ ಸರಕಾರ ಬಂದರೂ ಪೊಲೀಸರ ಒಳಿತಿಗಾಗಿ ಅವರ ಸೌಕರ್ಯಗಳಿಗೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಈಗ ವಿರೋಧ ಪಕ್ಷಗಳು ಪೊಲೀಸರ ಪ್ರತಿಭಟನೆಗೆ ಬೆಂಬಲ ಕೊಡುವ ಮತ್ತು ಈಗಿನ ಸರಕಾರದ ವಿರುದ್ಧ ಹೇಳಿಕೆಗಳನ್ನು ಕೊಡುತ್ತಾ ತಮ್ಮ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿರುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳಿಗೆ ಸಂಬಳ ಕಮ್ಮಿ, ಕೆಲಸ ಜಾಸ್ತಿ. ದಕ್ಷಿಣ ಭಾರತದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮವರ ಮಾಸಿಕ ವೇತನದಲ್ಲಿ ರೂ. 10 ಸಾವಿರದಿಂದ ರೂ. 15 ಸಾವಿರದವರೆಗೆ ವ್ಯತ್ಯಾಸವಿದೆ. ಅವರಿಗೆ ವಾರಕ್ಕೆ ಒಂದು ರಜೆ ಇಲ್ಲ. ಹಬ್ಬ-ಹರಿದಿನದಲ್ಲೂ ರಜೆ ಇಲ್ಲ. ದಿನದಲ್ಲಿ 12 ರಿಂದ 15 ಗಂಟೆ ಹಗಲು-ರಾತ್ರಿ ಎನ್ನದೆ ಕರ್ತವ್ಯ. ಸರಾಸರಿ 450 ಜನಸಂಖ್ಯೆಗೆ 1 ಪೊಲೀಸ್ ಇರಬೇಕು. ಆದರೆ ಇಲ್ಲಿ 850 ಜನರಿಗೆ 1 ಪೊಲೀಸ್. ಎಲ್ಲಾ ಠಾಣೆಗಳಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿಯಾಗಿಲ್ಲ ಮತ್ತು ಅವರ ವಾಸವಿರುವ ವಸತಿಗಳ ಪರಿಸ್ಥಿತಿಯಂತೂ ತುಂಬಾ ಕೆಟ್ಟದಾಗಿದೆ. ಇವರು ನಿರ್ಮಿಸಿದ ವಸತಿಗಳು ಒಂದೋ ಕಳಪೆಯಾದರೆ ಅದರ ನಿರ್ವಹಣೆಯಂತೂ ದೂರದ ಮಾತು. ಇವರಿಂದ ಇನ್ನೂ 10,000 ವಸತಿಗಳ ನಿರ್ಮಾಣ ಬಾಕಿ ಇದೆ. ಸರಕಾರದಲ್ಲಿ ಹಣದ ಕೊರತೆ ಇಲ್ಲ. ಆದರೆ ಸರಕಾರ ಮತ್ತು ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿಯ ಕೊರತೆ ಮತ್ತು ಭ್ರಷ್ಟಾಚಾರದಿಂದ ಈ ಕೆಲಸ ನೆನೆಗುದಿಗೆ ಬಿದ್ದಿದೆ. ರಾಜ್ಯದ ಬಡ್ಜೆಟ್‍ನಲ್ಲಿ ವಾರ್ಷಿಕ ರೂ. 3,663 ಕೋಟಿ ಪೊಲೀಸ್ ಇಲಾಖೆಗೆ ನೀಡಲಾಗುತ್ತದೆ. ಆದರೂ ಖಾಲಿ ಇರುವ ಹುದ್ದೆಗಳು ಭರ್ತಿಯಾಗುವದಿಲ್ಲ. ಇವತ್ತು 33,000 ಹುದ್ದೆಗಳು ಖಾಲಿ ಇದೆ.

ಪೊಲೀಸರ ಕಲ್ಯಾಣಕ್ಕೆ ದೇಶದ ಉನ್ನತ ನ್ಯಾಯಾಲಯಗಳ ನಿರ್ದೇಶನಗಳು, ವೇತನ ಆಯೋಗದ ಶಿಫಾರಸ್ಸು ಯಾವದನ್ನು ಸರಕಾರ ಪಾಲಿಸಿಲ್ಲ. ಆದರೆ ಮಂತ್ರಿಗಳ, ಶಾಸಕರ ಸಂಬಳ, ಭತ್ಯೆ ನೂರಕ್ಕೆ ನೂರು ಹೆಚ್ಚಿಸಿಕೊಳ್ಳುತ್ತಾರೆ. ಇದಕ್ಕೆ ಯಾವ ಅಡಚಣೆ, ವಿರೋಧ ಇಲ್ಲ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸೇವೆಯಲ್ಲಿರುವಾಗ ಯಾವ ಅಭಿವೃದ್ಧಿಯನ್ನು ಮಾಡದೆ ನಿವೃತ್ತಿಯಾದ ಮೇಲೆ ಇಲಾಖೆಯ ಸಿಬ್ಬಂದಿಗಳಿಗೆ ಕನಿಕರ ತೋರಿಸುತ್ತಾರೆ. ಮೊಸಳೆ ಕಣ್ಣೀರು ಸುರಿಸುತ್ತಾರೆ.

ಈ ಅನ್ಯಾಯಗಳನ್ನು ಪ್ರತಿಭಟಿಸಿದರೆ ಸರಕಾರ ಅವರೊಡನೆ ಮಾತುಕಥೆಗೆ ಬದಲಾಗಿ ಅವರ ಮೇಲೆ ದಬ್ಬಾಳಿಕೆ ಮಾಡಿ ಎಸ್ಮಾ ಎಂಬ ಖಾಯಿದೆಯಿಂದ ಅವರ ಬಾಯಿ ಮುಚ್ಚಿಸುತ್ತಾರೆ. ಅವರ ನಾಯಕರನ್ನು ರಾತೋರಾತ್ರಿ ಬಂಧಿಸಿ ಜಾಮೀನು ಸಿಕ್ಕದ ಕೇಸು ಹಾಕಿ ಜೈಲಿಗೆ ಹಾಕುತ್ತಾರೆ. ಅವರ ಕುಟುಂಬ ಸದಸ್ಯರನ್ನು ವಸತಿ ಗೃಹದಿಂದ ಖಾಲಿ ಮಾಡುವ ಧಮಕಿ ಹಾಕುತ್ತಾರೆ. ಪೊಲೀಸರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲ ಸರಿ. ಆದರೆ ಅವರ ಪರವಾಗಿ ಬೀದಿಗೆ ಇಳಿದ ಸಂಘ-ಸಂಸ್ಥೆಗಳ ನಾಯಕರನ್ನೂ ಬಂಧಿಸುತ್ತಾರೆ. ವಿಪರ್ಯಾಸವೆಂದರೆ ಪೊಲೀಸರ ಪರವಾಗಿ ಪ್ರತಿಭಟನೆ ಮಾಡಿದವರನ್ನು ಅದೇ ಪೊಲೀಸರಿಂದ ದಸ್ತಗಿರಿ ಮಾಡಿಸುತ್ತಾರೆ. ಆದರೆ ಸರಕಾರ ಗಮನಿಸಬೇಕಾದ ವಿಷಯ ಏನೆಂದರೆ, ಹತಾಶರಾದ ಪೊಲೀಸರು ಸರಕಾರದ ಬೆದರಿಕೆ, ಒತ್ತಡ ಮತ್ತು ಇಲಾಖೆಯಲ್ಲೇ ಒಡಕನ್ನು ತಂದು ಪ್ರತಿಭಟನೆಯನ್ನು ತಡೆದಿರಬಹುದು. ಆದರೆ ಇದು ಸರಕಾರಕ್ಕೆ ಎಚ್ಚರಿಕೆ ಗಂಟೆ. ಇದೇ ಪರಿಸ್ಥಿತಿ ಮುಂದುವರೆದರೆ ಸಿಪಾಯಿ ದಂಗೆಯಂತಹ ಸನ್ನಿವೇಶ ಬರಬಹುದು. ಸರಕಾರ ಕೂಡಲೇ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಕೊಟ್ಟ ಆಶ್ವಾಸನೆಗಳನ್ನು ಪೂರೈಸಬೇಕು.

- ಮಣಿ ಬೋಜಪ್ಪ, ಮಡಿಕೇರಿ.