ಮಡಿಕೇರಿ, ಆ. 5: ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ವತಿಯಿಂದ ಮಡಿಕೇರಿಯಲ್ಲಿ ತಾ. 6 ರಂದು (ಇಂದು) ನಡೆಯಲಿರುವ ಸೇವಾ ನಿವೃತ್ತ ಯೋಧರ ಬೃಹತ್ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಸೇವಾ ನಿವೃತ್ತ ಯೋಧರು ಹಾಗೂ ಹುತಾತ್ಮ ಯೋಧರ ಪತ್ನಿಯರ (ವೀರ ನಾರಿಯರು) ಹಿತರಕ್ಷಣೆ ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭಕ್ಕೆ ಭೂಸೇನೆಯ ವರಿಷ್ಠ ಜನರಲ್ ದಲ್ಬೀರ್ ಸಿಂಗ್ ಚಾಲನೆ ನೀಡಲಿದ್ದಾರೆ. ದಕ್ಷಿಣ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್, ದಕ್ಷಿಣ ಭಾರತ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಜಗ್ಬೀರ್ ಸಿಂಗ್, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಕೆ.ಎಸ್. ನಿಜ್ಜರ್ ಹಾಗೂ ಹಿರಿಯ ಸೇನಾಧಿಕಾರಿಗಳು ಮತ್ತು ರಾಜ್ಯ ಸೈನಿಕ ಮಂಡಳಿ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ರಾಜ್ಯ ಆಡಳಿತ ಹಾಗೂ ರಾಜ್ಯ ಸೈನಿಕ ಮಂಡಳಿಗಳ ಸಹಭಾಗಿತ್ವದಲ್ಲಿ ಏರ್ಪಾಡಾಗಿರುವ ಈ ಸಮಾವೇಶದಲ್ಲಿ ಕೊಡಗು ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳ ಸೇವಾ ನಿವೃತ್ತ ಯೋಧರು ಹಾಗೂ ವೀರ ನಾರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಮಾವೇಶದಿಂದ ಸುಮಾರು 4,700ಕ್ಕೂ ಹೆಚ್ಚು ಮಾಜಿ ಸೈನಿಕರಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ. ಮಾಜಿ ಸೈನಿಕರೊಂದಿಗೆ ಸಂವಾದದ ಜತೆಗೆ ಸುಸಜ್ಜಿತ ವೈದ್ಯಕೀಯ ಶಿಬಿರ, ಪಿಂಚಣಿ ಕ್ಲಿನಿಕ್, ಕ್ಯಾಂಟೀನ್ ಸೇವೆ ಹಾಗೂ ಸೇನಾ ಕಲ್ಯಾಣ ಶಿಕ್ಷಣ ಸಂಘ, ಸೇನಾ ಕಲ್ಯಾಣ ನೇಮಕಾತಿ ಸಂಘ, ಮಾಜಿ ಸೈನಿಕರ ಸಂಘದ ಮಳಿಗೆಗಳು, ಆಧಾರ್ ಕಾರ್ಡ್ ನೋಂದಣಿ ಮತ್ತು ಬ್ಯಾಂಕ್ ಸಾಲ ಸೌಲಭ್ಯದ ಮಳಿಗೆಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ.
ಜನರಲ್ ದಲ್ಬೀರ್ ಸಿಂಗ್ ಸೇನಾ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷೆ ನಮಿತಾ ಸುಹಾಗ್ ಹಾಗೂ ಸಂಘದ ಪ್ರಾದೇಶಿಕ ಅಧ್ಯಕ್ಷೆ ಮಧುಲಿಕಾ ರಾವತ್ ಅವರ ಜತೆಗೂಡಿ ವೀರ ನಾರಿಯರನ್ನು ಸನ್ಮಾನಿಸಲಿದ್ದಾರೆ. ಪಿಂಚಣಿ ವಿತರಣೆಯಲ್ಲಿನ ಸಮಸ್ಯೆ ನಿವಾರಣೆ, ಮಾಜಿ ಸೈನಿಕರು ಹಾಗೂ ವೀರ ನಾರಿಯರು ಎದುರಿಸುತ್ತಿರುವ ಭೂ ಮತ್ತು ಕಾನೂನು ಪ್ರಕರಣಗಳು ಮುಂತಾದ ಅಂಶಗಳಿಗೆ ರ್ಯಾಲಿಯಲ್ಲಿ ಒತ್ತು ನೀಡಲಾಗುವದು. ಸರಕಾರ ಮತ್ತು ಸೇನೆಯ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಮಾಜಿ ಸೈನಿಕರಿಗೆ ಒಂದೇ ಸ್ಥಳದಲ್ಲಿ ಒದಗಿಸಿಕೊಡಲು ರ್ಯಾಲಿ ನೆರವಾಗಲಿದೆ.
ಜನರಲ್ ದಲ್ಬೀರ್ ಸಿಂಗ್ ಮಾಜಿ ಸೈನಿಕರ ಹಿತರಕ್ಷಣೆಗೆ ಸರಕಾರ ಮತ್ತು ಸೇನೆಯ ಬದ್ಧತೆಯನ್ನು ವ್ಯಕ್ತಪಡಿಸುವ ನಿರೀಕ್ಷೆಯಿದೆ. ಅವರು ಸಮಾವೇಶದ ಬಳಿಕ ಸೈನಿಕ ಭೋಜನದಲ್ಲೂ ಮಾಜಿ ಸೈನಿಕರು ಹಾಗೂ ವೀರ ನಾರಿಯರೊಂದಿಗೆ ಪಾಲ್ಗೊಳ್ಳಲಿದ್ದಾರೆ.
ಜನರಲ್ ದಲ್ಬೀರ್ ಸಿಂಗ್, ಕಾರ್ಯಪ್ಪ ಸ್ಮಾರಕ ಉದ್ಯಾನಕ್ಕೆ ತೆರಳಿ ದಿವಂಗತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ದಿವಂಗತ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ನಿವಾಸ ‘ಸನ್ನಿ ಸೈಡ್‘ಗೂ ಭೇಟಿ ನೀಡಲಿದ್ದಾರೆ.