ಮಡಿಕೇರಿ, ಆ. 2: ಸೈನಿಕರ ನಾಡಿಗೆ ಸೇನಾಧಿಪತಿ ಬರುವದೆಂದರೆ ಅದೊಂದು ವಿಶಿಷ್ಟ ಸಡಗರ-ಉಲ್ಲಾಸ ಹಾಗೂ ಕುತೂಹಲ. ಭಾರತೀಯ ಭೂಸೇನೆಯ ಮಹಾ ದಂಡನಾಯಕ ಜನರಲ್ ದಲ್‍ಬೀರ್ ಸಿಂಗ್ ಅವರು ತಾ. 5 ರಂದು ಕೊಡಗಿಗೆ ಆಗಮಿಸಿ ತಾ. 6 ರಂದು ಮಡಿಕೇರಿ ಯಲ್ಲಿ ಮಾಜಿ ಸೈನಿಕರ ಮಹಾಮೇಳ ದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೇನೆಯ ಈ ಅತ್ಯುನ್ನತ ಅಧಿಕಾರಿ ಅಂದು ಜಿಲ್ಲೆಯ ಎಲ್ಲ ವರ್ಗದ ಮಾಜಿ ಸೈನಿಕರನ್ನು ಖುದ್ದು ಭೇಟಿಯಾಗಿ ವೈಯಕ್ತಿಕ ಕ್ಷೇಮಲಾಭ, ಕಷ್ಟ-ಸುಖ, ಬೇಕು-ಬೇಡಿಕೆಗಳನ್ನು ವಿಚಾರಿಸಿ ಸ್ಥಳದಲ್ಲೇ ಸ್ಪಂದಿಸಲಿದ್ದಾರೆ. ಜೊತೆಗೆ ಕೊಡಗಿನ ವೀರನಾರಿ (ಯುದ್ಧದಲ್ಲಿ ವೀರ ಮರಣ ಅಪ್ಪಿದ ಯೋಧರ ಮಡದಿ)ಯರಿಗೆ ವಿಶೇಷ ನೆನಪಿನ ಕಾಣಿಕೆಗಳನ್ನು ನೀಡಲಿದ್ದಾರೆ. ಭೂಸೇನೆಯ ಅತ್ಯುನ್ನತ ಪದವಿಯಲ್ಲಿರುವ ಅಧಿಕಾರಿ ಕೊಡಗಿಗೆ ಭೇಟಿ ನೀಡುವ ಸಂದರ್ಭದಲ್ಲಿ ಜಿಲ್ಲೆಯ ಹಲವು ಸಂಘ-ಸಂಸ್ಥೆಗಳು, ಸಮಾಜಗಳು ಅವರಿಗೆ ತಮ್ಮ ಬೇಕು-ಬೇಡಿಕೆಗಳ ಮನವಿ ಅರ್ಪಿಸುವದು ನಿರೀಕ್ಷಿತವೇ ಸರಿ. ಈ ನಿಟ್ಟಿನಲ್ಲಿ ವೀರನಾಡಿನ ಕೆಲವು ಪ್ರಮುಖ ಜನಪರ ಬೇಡಿಕೆಗಳು ಇಂತಿವೆ.

ಸೇನಾ ಆಯ್ಕಾ ಕೇಂದ್ರ

ಕೊಡಗು ಯೋಧರ ಜಿಲ್ಲೆ ಎನಿಸಿದರೂ ಇಲ್ಲಿ ಇದುವರೆಗೆ ಸೇನಾ ಆಯ್ಕಾ ಕೇಂದ್ರ ಸ್ಥಾಪನೆ ಆಗಿರುವದಿಲ್ಲ. ಜಿಲ್ಲೆಯ ಅನೇಕ ಸಬಲ ಯುವ ಜನರು ಮಿಲಿಟರಿ, ಪ್ಯಾರಾಮಿಲಿಟರಿ ಪಡೆಗಳಲ್ಲಿ ಸಮರ್ಥ ಸೇವೆ ಸಲ್ಲಿಸುತ್ತಿದ್ದು, ಮುಂದೆ ಕೂಡ ಹೆಚ್ಚಿನವರು ದೇಶ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸ್ಥಳೀಯವಾಗಿ ಆಯ್ಕಾ ಕೇಂದ್ರ ಇದ್ದರೆ ತುಂಬ ಅನುಕೂಲ. ವೃತ್ತಿ ಕ್ಷೇತ್ರದ ಪ್ರಬಲ ಪೈಪೋಟಿಯ ಫಲವಾಗಿ ಹೆಚ್ಚಿನ ಯುವಕರು ಐಟಿ-ಬಿಟಿ ಸೇರಿದಂತೆ ಇತರೇ ಕ್ಷೇತ್ರಗಳತ್ತ ವಾಲುತ್ತಿದ್ದಾರೆ. ಹೀಗಿರುವಾಗ ದೇಶದ ಭೂಸೇನೆ, ವಾಯುಸೇನೆ, ನೌಕಾಸೇನೆಯ ಸಾಮಾನ್ಯ ವರ್ಗಕ್ಕೆ ಸೇರಲಿಚ್ಚಿಸುವವರಿಗೆ ಅನುಕೂಲವಾಗುವಂತೆ ಕೊಡಗಿನಲ್ಲಿ ಸೇನಾ ಆಯ್ಕಾ ಕೇಂದ್ರ (ಬಿ.ಆರ್.ಓ.) ಸ್ಥಾಪಿಸಬೇಕು. (ಇದೀಗ ಸಮೀಪದ ಆಯ್ಕಾ ಕೇಂದ್ರ 135 ಕಿ.ಮೀ. ದೂರದ ಮಂಗಳೂರಿನಲ್ಲಿದೆ).

ಸೇನಾ ಆಸ್ಪತ್ರೆ

ಕೊಡಗಿನಲ್ಲಿ ಸುಮಾರು ಎಂಟು ಸಾವಿರದಷ್ಟು ಮಾಜಿ ಸೈನಿಕರಿದ್ದರೂ, ಇಲ್ಲಿ ಪೂರ್ಣ ಪ್ರಮಾಣದ ಸೇನಾ ಆಸ್ಪತ್ರೆಯಿಲ್ಲ. ಹೀಗಾಗಿ ಸೂಕ್ತ ಚಿಕಿತ್ಸಾರ್ಥ ಮಾಜಿ ಸೈನಿಕರು 260 ಕಿ.ಮೀ. ದೂರದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ತೆರಳಬೇಕಾಗಿದೆ. ವಯೋವೃದ್ಧರು, ಅಂಗವಿಕಲರು ಮತ್ತು ಅವರ ಕುಟುಂಬದವರು ದೂರದ ಬೆಂಗಳೂರಿಗೆ ತೆರಳುವದು ತ್ರಾಸದಾಯಕ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಪಾಲಿಗಂತೂ ಇದು ಅಸಾಧ್ಯ ಕೂಡ. ಹೀಗಿರುವಾಗ ಹಿರಿಯ ಮಾಜಿ ಸೈನಿಕರು ಹಾಗೂ ಅವರ ಕುಟುಂಬ ವರ್ಗದವರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಪೂರ್ಣಪ್ರಮಾಣದ ಸೇನಾ ಆಸ್ಪತ್ರೆಯನ್ನು (ಮಿಲಿಟರಿ ಹಾಸ್ಪಿಟಲ್) ಸ್ಥಾಪನೆ ಮಾಡಬೇಕು.

ಟೆರಿಟೋರಿಯಲ್ ಆರ್ಮಿ

18 ರಿಂದ 42ರ ಹರೆಯದ ಸಬಲ ಪದವೀಧರರು ಮನೆಯಲ್ಲಿದ್ದುಕೊಂಡು ಸ್ವಉದ್ಯೋಗ, ವೃತ್ತಿ, ವ್ಯಾಪಾರ, ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡೇ ‘ಪಾರ್ಟ್‍ಟೈಂ ಜಾಬ್’ನಂತೆ ಆರ್ಮಿ ಅಧಿಕಾರಿಯ ಜವಾಬ್ದಾರಿಯನ್ನು ನಿರ್ವಹಿಸಲು ಅವಕಾಶವಿರುವ ಟೆರಿಟೋರಿಯಲ್ ಆರ್ಮಿ ಘಟಕವನ್ನು ಕೊಡಗಿನಲ್ಲಿ ಸ್ಥಾಪಿಸಬೇಕು. ಇದು ಸ್ಥಳೀಯ ಸದೃಢರಿಗೆ ಬಹಳ ಪ್ರಯೋಜನವನ್ನು ತಂದುಕೊಡಲಿದೆಯಲ್ಲದೆ ಸೇನಾ ಜಾಗೃತಿಗೂ ನೆರವಾಗಬಲ್ಲದು.

ಭೂಸೇನಾ ಘಟಕ

ಕಠಿಣ ತರಬೇತಿಗೆ ಪೂರಕವಾದ ಪ್ರಕೃತಿ ಪರಿಸರ, ಹವಾಮಾನ, ವಾತಾವರಣ ಕೊಡಗಿನಲ್ಲಿರುವದರಿಂದ ಇಲ್ಲಿ ಎಂ.ಇ.ಜಿ., ಎ.ಎಸ್.ಸಿ ಇಂತಹ ಯಾವದಾದರೊಂದು ಖಾಯಂ ಭೂಸೇನಾ ಘಟಕವನ್ನು ಸ್ಥಾಪಿಸುವಂತಾಗಬೇಕು. (ಮಡಿಕೇರಿ ಸಮೀಪದ ಗಾಳಿಬೀಡು ಗ್ರಾಮದಲ್ಲಿ ಭಾರತೀಯ ಭೂಸೇನೆಗಾಗಿ ಈಗಾಗಲೇ 52 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ ಎನ್ನಲಾಗಿದೆ.)

ಕೂರ್ಗ್ ರೆಜಿಮೆಂಟ್

1845ರ ಸುಮಾರಿಗೆ ಮಡಿಕೇರಿಯಲ್ಲಿ ಸ್ಥಾಪನೆಗೊಂಡು ಕಾಲಾನಂತರ ಬೇರೆಡೆಗೆ ಸ್ಥಳಾಂತರಗೊಂಡು ಇದೀಗ ಪಂಜಾಬ್ ಗಡಿ ಭಾಗದಲ್ಲಿ ಕಾರ್ಯಾಚರಣೆಯಲ್ಲಿರುವ 37ನೇ ಕೂರ್ಗ್ ರೆಜಿಮೆಂಟ್ ಅನ್ನು ಮಗದೊಮ್ಮೆ ಮಡಿಕೇರಿಗೆ ಸ್ಥಳಾಂತರಗೊಳಿಸುವ ಮೂಲಕ ಬಲಪಡಿಸಬೇಕು.

ಮತ್ತೊಂದು ಆರ್ಮಿ ಕ್ಯಾಂಟೀನ್

ಗುಡ್ಡಗಾಡು ಹಾಗೂ ಕೃಷಿ ಪ್ರಧಾನ ಪ್ರದೇಶವಾದ ಕೊಡಗಿನ ಮಡಿಕೇರಿಯಲ್ಲಿ ಈಗಾಗಲೇ ಒಂದು ಆರ್ಮಿ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಅಧಿಕ ಸಂಖ್ಯೆಯ ಮಾಜಿ ಸೈನಿಕರು ನೆಲೆಸಿರುವ ವೀರಾಜಪೇಟೆ ತಾಲೂಕಿನ ಬಿರುನಾಣಿ, ಕುಟ್ಟದಂತಹ ಊರಿನಿಂದ ಮಡಿಕೇರಿ ಕ್ಯಾಂಟೀನ್‍ಗೆ ಬಂದು ಹೋಗಲು ಒಂದು ದಿನದ ಶ್ರಮ ಹಾಗೂ 200 ರೂಪಾಯಿಯಷ್ಟು ವೆಚ್ಚ ತಗಲುತ್ತದೆ. ಆದುದರಿಂದ ಶ್ರಮ, ಸಮಯ, ಹಣ ಉಳಿತಾಯ ಮತ್ತು ವಯೋವೃದ್ಧ ಮಾಜಿ ಸೈನಿಕರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಗೋಣಿಕೊಪ್ಪಲು ಅಥವಾ ಪೊನ್ನಂಪೇಟೆಯಲ್ಲಿ ಹೊಸ ಕ್ಯಾಂಟೀನ್ ಪ್ರಾರಂಭಿಸಬೇಕು.

ಆರಾಮ್‍ಘರ್: ವೃದ್ಧಾಪ್ಯದ ಅಂಚಿನಲ್ಲಿರುವ ಮಾಜಿ ಯೋಧರ ಸಾಂದರ್ಭಿಕ ವಾಸ್ತವ್ಯ, ವಿಶ್ರಾಂತಿಗೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ತಲಾ ಒಂದರಂತೆ ಆರಾಮ್‍ಘರ್ ಸ್ಥಾಪಿಸುವಂತಾಗಬೇಕು.

ಸೇನೆಯಲ್ಲಿ ಕಾಫಿ: ನಮ್ಮ ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ. 33 ರಷ್ಟನ್ನು ಕೊಡಗು ಜಿಲ್ಲೆಯಲ್ಲೇ ಬೆಳೆಯಲಾಗುತ್ತದೆ. ಪ್ರಸ್ತುತ ಸೇನೆಯಲ್ಲಿರುವ ಹಾಗೂ ನಿವೃತ್ತರಾದ ಬಹಳಷ್ಟು ಸೈನಿಕ ಸಂಸಾರಗಳಿಗೆ ಚಿಕ್ಕಪುಟ್ಟ ಕಾಫಿ ತೋಟಗಳಿವೆ. ಭಾರತೀಯ ಭೂಸೇನೆಯಲ್ಲಿ ಇಂದಿಗೂ ಕಾಫಿ ಸೇವನೆಯನ್ನು ಬಳಕೆಗೆ ತಂದಿರುವದಿಲ್ಲ. ಕಾಫಿಯ ಸೇವನೆಯು ವ್ಯಕ್ತಿಯನ್ನು ಉಲ್ಲಾಸಭರಿತವಾಗಿಯೂ, ಚೈತನ್ಯದಾಯಕವಾಗಿಯೂ ಇರಲು ಸಹಾಯ ಮಾಡಬಲ್ಲದು. ಹೀಗಿರುವಾಗ ಚಹಾದೊಂದಿಗೆ ಕಾಫಿಯನ್ನೂ ಬಳಸುವಂತಾದರೆ ಕಾಫಿಯ ಆಂತರಿಕ ಬಳಕೆ ವೃದ್ಧಿಯಾಗಿ ಕಾಫಿ ಬೆಳೆಗೆ ವಿಶೇಷ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ. ಜೊತೆಗೆ ಸಂಕಷ್ಟದಲ್ಲಿರುವ ಮಾಜಿ ಸೈನಿಕರೂ ಸೇರಿದಂತೆ ಸಂಕಷ್ಟದಲ್ಲಿರುವ ಸೈನಿಕರು ಚೇತರಿಸಿಕೊಳ್ಳಲು ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ.

ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ

ಮಡಿಕೇರಿಯಲ್ಲಿ ಈಗ ಪ್ರಗತಿಯ ಪಥದಲ್ಲಿರುವ ಸನ್ನಿಸೈಡ್‍ನ ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂನ ಉನ್ನತ್ತೀಕರಣಕ್ಕೆ ಭೂಸೇನೆಯು ಕನಿಷ್ಟ 5 ಕೋಟಿ ರೂಪಾಯಿಗಳ ವಿಶೇಷ ಅನುದಾನ ಮಂಜೂರು ಮಾಡಬೇಕು. ಅಲ್ಲದೆ ಜನರಲ್ ತಿಮ್ಮಯ್ಯ ಸ್ವರೆಜಿಮೆಂಟ್ ರಾಣಿಕೋಟ್‍ನ ಕುಮೋನ್ ರೆಜಿಮೆಂಟ್‍ನಿಂದ ತಿಮ್ಮಯ್ಯ ಅವರಿಗೆ ಸೇರಿದ ವಸ್ತು ವಿಶೇಷತೆಗಳು ಆಯುಧ ಹತ್ಯಾರುಗಳು, ಉಡುಗೆ ತೊಡುಗೆಗಳು, ಯುದ್ಧೋಪಕರಣಗಳು ಇತರೇ ಸಂಗ್ರಹ ವಸ್ತುಗಳನ್ನು ಆದಷ್ಟು ಶೀಘ್ರದಲ್ಲಿ ಮಡಿಕೇರಿ ಮ್ಯೂಸಿಯಂನಲ್ಲಿ ಲಭಿಸುವಂತೆ ಮಾಡಬೇಕು.

ಫೀಲ್ಡ್ ಮಾರ್ಷಲ್ ಸ್ಮರಣೆ

ಸ್ವತಂತ್ರ ಭಾರತದ ಪ್ರಪ್ರಥಮ ಮಹಾದಂಡ ನಾಯಕ, ದೇಶದ ರಕ್ಷಣಾ ಪಡೆಗಳ ಪಿತಾಮಹ, ಶಿಸ್ತಿನ ಸಾಕಾರ ಮೂರ್ತಿ, ಸಾಧನೆಗಳ ಸರದಾರ ಎಂದು ಖ್ಯಾತಿವೆತ್ತಿರುವ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರು ಬ್ರಿಟಿಷ್ ಸೇನಾಧಿಕಾರಿ ಜನರಲ್ ಬುಚರ್ ಅವರಿಂದ ಅಧಿಕಾರ ಸ್ವೀಕರಿಸಿದ ಜನವರಿ 15ನ್ನು ಭಾರತದಲ್ಲಿ ಇಂದಿಗೂ ಸೇನಾದಿನ (ಆರ್ಮಿಡೇ) ಎಂದು ಪ್ರತಿವರ್ಷ ಆಚರಿಸಲಾಗುತ್ತಿದೆ. ಇಂತಹ ಅಸಾಮಾನ್ಯ ಸೇನಾ ನಾಯಕನ ಸ್ಮರಣೆ ಸದಾಕಾಲ ಆಗಲು ಭೂಸೇನೆಯ ಉನ್ನತ ತರಬೇತಿ ಕೇಂದ್ರ, ಅಧ್ಯಯನ ಕೇಂದ್ರ, ಸಂಶೋಧನಾ ಕೇಂದ್ರ, ಶಿಸ್ತಿನ ಘಟಕ, ಐತಿಹಾಸಿಕ ಕವಾಯತು ಮೈದಾನ ಇಂತವುಗಳಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರು ಇಡಬೇಕು.

ಫೀ.ಮಾ.ಗೆ ಭಾರತ ರತ್ನ

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಈ ಹಿಂದೆಯೇ ಕರ್ನಾಟಕ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಆದರೂ ಅದು ಇನ್ನೂ ಪರಿಗಣಿತ ಆಗಿರುವದಿಲ್ಲ. ಹೀಗಿರುವಲ್ಲಿ ಭೂಸೇನಾ ಆಡಳಿತ ವತಿಯಿಂದಲೂ ಕೇಂದ್ರ ಸರಕಾರಕ್ಕೆ ಈ ಕುರಿತು ಶಿಫಾರಸನ್ನು ಮಾಡುವಂತೆ ಆಗಬೇಕು.

ಸೈನಿಕ ಶಾಲೆಯಲ್ಲಿ ಮೀಸಲಾತಿ

ಕೂಡಿಗೆ ಸೈನಿಕ ಶಾಲೆಯಲ್ಲಿ ಕೊಡಗು ಜಿಲ್ಲೆಯ ಅರ್ಹ ಮಕ್ಕಳಿಗೆ ಶೇ. 25 ರಷ್ಟು ಮೀಸಲಾತಿ ವ್ಯವಸ್ಥೆಗೊಳಿಸಬೇಕು. ಸೈನಿಕ ಶಾಲೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿರುವ ಉತ್ತರ ಕರ್ನಾಟಕದ ಮಕ್ಕಳು ಎನ್.ಡಿ.ಎ. ಪರೀಕ್ಷೆಯಲ್ಲಿ ನಿರಂತರ ವಿಫಲತೆಯನ್ನು ಕಾಣುತ್ತಿದ್ದಾರೆ. ಹೀಗಾಗಿ ಅಲ್ಲಿನ ಮಕ್ಕಳು ಸೈನ್ಯಾಧಿಕಾರಿಗಳಾಗಿ ರೂಪುಗೊಳ್ಳಲು ಸಾಧ್ಯ ಇಲ್ಲದಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಕೊಡಗಿನ ಮಕ್ಕಳಿಗೆ ಶೇ. 25 ರಷ್ಟು ಮೀಸಲಾತಿಯನ್ನು ಏರ್ಪಡಿಸಿದಲ್ಲಿ ಉತ್ತಮ ಫಲಿತಾಂಶಕ್ಕೆ ಆಸ್ಪದ ಕಲ್ಪಿಸಿದಂತಾಗುತ್ತದೆ.

ಇತ್ತೀಚೆಗೆ ಕೊಡಗಿನಿಂದ ರಕ್ಷಣಾ ಪಡೆಗಳಿಗೆ ಸೇರ್ಪಡೆ ಆಗುವವರ ಸಂಖ್ಯೆ ತೀರಾ ಕುಂಠಿತ ಆಗುತ್ತಿದೆ. ಈ ಲೋಪವನ್ನು ಸರಿಪಡಿಸಲು ಜಿಲ್ಲೆಯಲ್ಲಿ ಸಮರ್ಥ ತರಬೇತಿ ಕೇಂದ್ರ (ಕೋಚಿಂಗ್ ಸೆಂಟರ್) ಸ್ಥಾಪಿಸುವಂತಾಗಬೇಕು.

ಸರಕಾರಿ ಭೂಮಿ

ಕೊಡಗು ಮೂಲದ ಸೈನಿಕರು ಹಿಂದೆ ಸೇನೆಯಿಂದ ನಿವೃತ್ತಿಯಾಗಿ ಬಂದಲ್ಲಿ ಅವರಿಗೆ ರಾಜ್ಯ ಸರಕಾರದ ವತಿಯಿಂದ ತಲಾ 10 ಎಕರೆಯಷ್ಟು ಸರಕಾರಿ ಭೂಮಿಯನ್ನು ಉದಾರವಾಗಿ ನೀಡುವ ಪದ್ಧತಿ ಇತ್ತು. ಈಗ ಈ ಕ್ರಮ ನಿಂತು ಹೋಗಿರುವದರಿಂದ ಸೇನಾ ಸೇರ್ಪಡೆ ಕುಂಠಿತಗೊಂಡಿದೆ ಎನ್ನಬಹುದು. ಈ ಯೋಜನೆಯನ್ನು ಪುನರ್ ಪ್ರಾರಂಭಿಸಿದಲ್ಲಿ ಹೆಚ್ಚು ಅನುಕೂಲವಾಗಲಿದೆ.

ಮಾಜಿ ಸೈನಿಕ ಅಹವಾಲುಗಳನ್ನು ಆಲಿಸಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕನಿಷ್ಟ 3 ತಿಂಗಳಿಗೊಮ್ಮೆ ಮಾಜಿ ಸೈನಿಕರ ಸಭೆ ನಡೆಸುವಂತೆ ವ್ಯವಸ್ಥೆ ಮಾಡಬೇಕು. (ಇಂತಹ ಸಭೆಗೆ ಸೈನಿಕ ಕಲ್ಯಾಣ ಇಲಾಖೆ, ಕ್ಯಾಂಟೀನ್‍ನ ಪ್ರಮುಖರನ್ನು ಆಹ್ವಾನಿಸುವಂತಿರಬೇಕು).

(ಈ ಹಿಂದೆ ಮಡಿಕೇರಿಯಲ್ಲಿ ಶಾಂತೆಯಂಡ ಕಪ್ ಹಾಕಿ ನಮ್ಮೆ ನಡೆದ (8.5.2016) ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಶಾಂತೆಯಂಡ ಕುಟುಂಬಸ್ಥರು ಹಲವು ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು).

ಉಳಿದಂತೆ ದೆಹಲಿಯ ಪಾರ್ಲಿಮೆಂಟ್ ಹೌಸ್‍ನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಭಾವಚಿತ್ರ ಅನಾವರಣಗೊಳಿಸಬೇಕು. ನವದೆಹಲಿಯ ಸಂಸತ್ ಭವನದ ಸಮೀಪ ಫೀ.ಮಾ. ಕಾರ್ಯಪ್ಪ ಅವರ ಆಳೆತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು.

ಫೀ.ಮಾ. ಕಾರ್ಯಪ್ಪ ಜನ್ಮ ದಿನವಾದ ಜನವರಿ 28ನ್ನು ರಾಷ್ಟ್ರೀಯ ಶಿಸ್ತಿನ ದಿನವೆಂದು ಘೋಷಿಸಿ ಆಚರಿಸುವಂತಾಗಬೇಕು. ಅಂತೆಯೆ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಚೀಟಿ ಹೊರತರುವಂತೆ ಆಸಕ್ತಿ ವಹಿಸಬೇಕು. ದೆಹಲಿಯ ಐತಿಹಾಸಿಕ ಕವಾಯತು ಮೈದಾನಕ್ಕೆ ಫೀ.ಮಾ. ಕಾರ್ಯಪ್ಪ ಅವರ ಹೆಸರನ್ನು ಇಡಬೇಕು.

ಉತ್ತಮ ಬೆಳವಣಿಗೆ

ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆ ಮತ್ತು ಅದರ ಆವರಣದ ಶುಚಿತ್ವ ಕಾಪಾಡುವ ಸಲುವಾಗಿ ಭೂಸೇನೆಯ ವತಿಯಿಂದ ಮಾಸಿಕ 10 ಸಾವಿರ ರೂ. ಮಂಜೂರಾಗಿದ್ದು, ಪ್ರತಿಮೆಯ ದೈನಂದಿನ ಶುಚಿತ್ವಕ್ಕಾಗಿ ಇದನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಇದರ ಜವಾಬ್ದಾರಿಯನ್ನು ಮಡಿಕೇರಿಯ ಇ.ಸಿ.ಹೆಚ್.ಎಸ್. ಆಸ್ಪತ್ರೆಯ ಆಡಳಿತ ಮಂಡಳಿಗೆ ವಹಿಸಲಾಗಿದ್ದು, ಇದೊಂದು ಉತ್ತಮ ಬೆಳವಣಿಗೆಯಾಗಿದೆ.

ತಾ. 6 ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್‍ನಲ್ಲಿ ನಡೆಯಲಿರುವ ಸೇನಾಧಿಕಾರಿಯ ಅಪರೂಪದ ಕಾರ್ಯಕ್ರಮದಲ್ಲಿ ನಾಡಿನ ಎಲ್ಲ ಮಾಜಿ ಸೈನಿಕರು, ಸೈನಿಕರ ವಿಧವೆಯರು, ವೀರನಾರಿಯರು ಪಾಲ್ಗೊಂಡು ಸಹಕರಿಸುವದು ಅಪೇಕ್ಷಣೀಯವಾಗಿದೆ.