ಕೂಡಿಗೆ, ನ. 8: ಕೂಲಿ ಕಾರ್ಮಿಕರಿಗೆ ಇನ್ನಿತರ ಭಾಗಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಕಾರ್ಮಿಕ ಯೋಜನೆಯ ವಿಮಾ ಪಾಲಿಸಿ ಮತ್ತು ಕಾರ್ಮಿಕರಿಗಾಗಿ ವರ್ಷಂಪ್ರತಿ ಅನುಷ್ಠಾನಗೊಳ್ಳುವ ಕಾರ್ಮಿಕರ ನಿಧಿ ಒಳಗೊಂಡಂತೆ ವಿವಿಧ ಯೋಜನೆಗಳು ಸದುಪಯೋಗವಾಗಬೇಕು. ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.

ಕೂಡಿಗೆಯ ಐಎನ್‍ಟಿಯುಸಿಯಲ್ಲಿ ನಡೆದ ಕಾರ್ಮಿಕರ ನೋಂದಾವಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಕಾರ್ಮಿಕರಿಗೆ ಅನುಷ್ಠಾನಗೊಳಿಸುವ ಹಣ ಉಪಯೋಗವಾಗದೇ ಹಿಂತಿರುಗಿ ಹೋಗುತ್ತಿರುವದು ಕಂಡುಬಂದಿದೆ. ಈ ರೀತಿ ಆಗದಂತೆ ತಮ್ಮ ಕೆಲಸಗಳ ನಡುವೆ ಸಂಘಕ್ಕೆ ಕಾರ್ಮಿಕರು ನೋಂದಾಯಿಸಿಕೊಳ್ಳುವದರ ಮೂಲಕ ಸಿಗುವ ಎಲ್ಲಾ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ತನ್ನ ಬದುಕನ್ನು ಹಸನುಗೊಳಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಐಎನ್‍ಟಿಯುಸಿಯ ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್ ಮಾತನಾಡಿ, ಕಾರ್ಮಿಕರು ಸಂಘಟಿತರಾಗುವ ಮೂಲಕ ಯೋಜನೆಗಳ ಅರಿವು ಪಡೆದು ಸೌಲಭ್ಯಗಳನ್ನು ಮತ್ತು ವಿವಿಧ ಹಂತಗಳಲ್ಲಿ ನೀಡುವ ಸಾಲ ಸೌಲಭ್ಯ ವ್ಯವಸ್ಥೆ ಪಡೆದು ಕೊಳ್ಳಬೇಕೆಂದರು.

ಈ ಸಂದರ್ಭ ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೂಡುಮಂಗಳೂರು, ಚಿಕ್ಕತ್ತೂರು, ದೊಡ್ಡತ್ತೂರು ವ್ಯಾಪ್ತಿಗಳ ವಿವಿಧ ಖಾಸಗಿ ವಾಹನಗಳ ಚಾಲಕರು ನೊಂದಣಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಜಿಲ್ಲಾ ಐಎನ್‍ಟಿಯುಸಿ ಕಾರ್ಯದರ್ಶಿ ಗೋವಿಂದ್‍ರಾಜ್ ದಾಸ್, ರಫೀಕ್ ಮೊದಲಾದವರು ಇದ್ದರು.