ಮಡಿಕೇರಿ, ಜ. 13: ಯುವಜನತೆ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಜಾಗೃತವಾದಾಗ ಭಾರತ ದೇಶ ಜಗದ್ಗುರುವಾಗಲಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಮಡಿಕೇರಿ ನಗರ ಘಟಕ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 154ನೇ ಜನ್ಮ ವರ್ಷಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ವೀರ-ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಇತರರಿಗೆ ಮೇಲ್ಪಂಕ್ತಿಯಾಗಿದ್ದರು. ದೇಶದ ಹಿರಿಮೆ ಹಾಗೂ ಗರಿಮೆಯನ್ನು ಪ್ರಪಂಚಕ್ಕೆ ಸಾರಿದ ಸ್ವಾಮಿ ವಿವೇಕಾನಂದರು ವಿದೇಶದಲ್ಲಿ ದೇಶಕ್ಕೆ ಮನ್ನಣೆಯನ್ನು ತಂದಿತ್ತಿದ್ದರು. ದೇಶದ ಅಡಿಪಾಯ ಧರ್ಮದ ತಳಹದಿಯಲ್ಲಿ ನಿಂತಿದೆ. ಭಾರತ ದೇಶ ಭೋಗ ಭೂಮಿಯಾದರೆ, ತ್ಯಾಗದ ಭೂಮಿಯಾಗಿದೆ. ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದರು ಎಂದ ಅವರು ಇಂದು ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಹೆಚ್ಚಾಗಿದೆ.

ಕಾಲೇಜು ಕ್ಯಾಂಪಸ್‍ಗಳಲ್ಲಿ ವೈಚಾರಿಕಾ ಭಯೋತ್ಪಾದನೆ ಮೂಲಕ ದೇಶ ವಿರೋಧಿ ಕೃತ್ಯಗಳು ಅಧಿಕವಾಗುತ್ತಿದೆ. ಇದರಿಂದ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ. ವಿದ್ಯಾರ್ಥಿಗಳು ಹಾಗೂ ಯುವಜನತೆ ಸ್ವಾಮಿ ವಿವೇಕಾನಂದ ಕೃತಿಗಳನ್ನು ಓದುವ ಮೂಲಕ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಸಾಮಾಜಿಕ ಸಂವೇದನಾಶೀಲ ವ್ಯಕ್ತಿತ್ವವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.

ಪರಿಷತ್‍ನ ಜಿಲ್ಲಾ ಸಂಚಾಲಕ ಮನು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಸಂಧ್ಯಾ ಸಂಗಡಿಗರು ಪ್ರಾರ್ಥಿಸಿ, ಉಮೇಶ್ ಸ್ವಾಗತಿಸಿದರೆ, ಸುಭಾಷ್ ಕಾರ್ಯಕ್ರಮ ನಿರೂಪಿಸಿ, ಸುಬ್ರಮಣಿ ವಂದಿಸಿದರು. ಈ ಸಂದರ್ಭ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದರಾಜು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.