ವೀರಾಜಪೇಟೆ, ನ. 16: ದೇಶದ ಯುವಶಕ್ತಿ ಅತಿದೊಡ್ಡ ಸಂಪತ್ತು; ಸಮಾಜದ ಪುನರ್ ನಿರ್ಮಾಣದಲ್ಲಿ ಯುವ ಜನತೆಗೆ ಮಹತ್ತರ ಹೊಣೆಗಾರಿಕೆ ಇದೆ ಎಂದು ಬಾಳಲೆಯ ಕಂದಾಯ ನಿರೀಕ್ಷಕ ಟಿ.ಸಿ. ಚಂದ್ರನ್ ಹೇಳಿದ್ದಾರೆ.

ಪಾಲಿಬೆಟ್ಟದ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವಜನತೆ ಮತ್ತು ರಾಷ್ಟ್ರ ನವೀಕರಣ ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಈ ವಿಷಯವನ್ನು ತಿಳಿಸಿದರು. ವಿದ್ಯಾರ್ಥಿಗಳು ಶ್ರೇಷ್ಟ ಆದರ್ಶದ ವಕ್ತಾರರಾಗಬೇಕು. ರಾಷ್ಟ್ರ ಪ್ರೇಮ, ರಾಷ್ಟ್ರೀಯತೆಯೆಂಬದು ಕೇವಲ ಫ್ಯಾಷನ್ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ‘ಶಾಂತಿ ಮತ್ತು ಮಾನವೀಯತೆ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ವೀರಾಜಪೇಟೆಯ ಪಿ.ಕೆ. ಅಬ್ದುಲ್ ರೆಹೆಮಾನ್ ನಮ್ಮ ದೇಶವು ಎಲ್ಲಾ ಧರ್ಮೀಯರ ಸಹಬಾಳ್ವೆಯ ಪಾರಂಪರ್ಯವನ್ನು ಹೊಂದಿದೆ. ವಿದ್ವೇಶದಿಂದ ಬದುಕಿನ ಗುಣಮಟ್ಟ ಕೆಳಹಂತಕ್ಕೆ ಇಳಿಯುತ್ತದೆ. ಮುಕ್ತ ಮತ್ತು ಶುದ್ಧವಾದ ವಾತಾವರಣದಲ್ಲಿ ಮಾತ್ರ ಆದರ್ಶ ಮತ್ತು ಸಿದ್ಧಾಂತಗಳು ಬೆಳೆಯಲು ಸಾಧ್ಯ. ರಾಷ್ಟ್ರ ಪ್ರೇಮಕ್ಕಿಂತ ಪ್ರೇಮವಿರುವ ರಾಷ್ಟ್ರದ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಳೆಯಂಡ ಪಾರ್ಥ ಚಿಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ-ಚಾರಿತ್ರವಂತರಾಗಿ ಬದುಕಬೇಕು. ಹಿರಿಯರಿಗೆ ಗೌರವ, ಕಿರಿಯರೊಂದಿಗಿನ ಪ್ರೀತಿ ನಮ್ಮ ಘನತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಹಾದಿ ತಪ್ಪದಂತೆ ಎಚ್ಚರವಹಿಸಬೇಕು ಎಂದರು. ಅಮ್ಮತ್ತಿ ಪೊಲೀಸ್ ಉಪ ಠಾಣೆಯ ಮುಖ್ಯ ಪೇದೆ ಹೆಚ್.ಎಸ್. ಶ್ರೀನಿವಾಸ್ ಈ ಸಂದರ್ಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಗುಡ್ ಶೆಪೆರ್ಡ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಇಸಬೆಲ್ಲ ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಜನಸೇವೆ ದೇವರ ಸೇವೆಯೆಂಬದನ್ನು ಅರಿತಿರಬೇಕು. ಜೀವನದ ಅವಧಿಗಿಂತ ಬದುಕಿನ ಮೌಲ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಪ್ರಾಮಾಣಿಕ-ಸದ್ಗುಣಗಳಿಂದ ಮಾತ್ರ ಮನುಷ್ಯ ಗುರುತಿಸಲ್ಪಡುತ್ತಾನೆ ಎಂದು ಹೇಳಿದರು. ಅಮ್ಮತ್ತಿ-ಕಾರ್ಮಾಡು ಪಂಚಾಯಿತಿ ಸದಸ್ಯರಾದ ಸರೋಜಿನಿ ಮಂಜುನಾಥ್, ಹೆಚ್.ಎನ್. ದೇವತರಾಜು ಅತಿಥಿಗಳಾಗಿ ಆಗಮಿಸಿದ್ದರು.