ಮಡಿಕೇರಿ ಜ.22 : ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಯುವ ಸಪ್ತಾಹದ ಸಮಾರೋಪ ಸಮಾರಂಭ ತಾ.25 ರಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಗರದಲ್ಲಿ ಜಾಗೃತಿ ಜಾಥಾ ಹಾಗೂ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುವ ಸಮೂಹಕ್ಕೆ ಆದರ್ಶ ಪುರುಷರಾಗಿದ್ದ ಸ್ವಾಮಿ ವಿವೇಕಾ ನಂದರ ಜೀವನ ಚರಿತ್ರೆ ಹಾಗೂ ಸಂದೇಶಗಳ ಬಗ್ಗೆ ಜನ ಜಾಗೃತಿ ಮೂಡಿಸುವದಕ್ಕಾಗಿ ಜಿಲ್ಲಾ ಬಿಜೆಪಿ ಕಚೇರಿಯಿಂದ ಫೀ.ಮಾ. ಕಾರ್ಯಪ್ಪ ವೃತ್ತದವರೆಗೆ ಜಾಗೃತಿ ಜಾಥಾ ನಡೆಸಿ ನಂತರ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಗುವ ದೆಂದು ತಿಳಿಸಿದರು.

ಜಾಥಾಕ್ಕೂ ಮೊದಲು ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 10.30 ಕ್ಕೆ ಸಭೆ ನಡೆಸಿ ಸ್ವಾಮಿ ವಿವೇಕಾನಂದರಿಗೆ ಗೌರವ ಅರ್ಪಿಸಲಾಗುವದೆಂದು ಹೇಳಿದರು. ಈಗಾಗಲೇ ಯುವ ಸಮೂಹದಲ್ಲಿ ವಿವೇಕಾನಂದರ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸಲು ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇಂದಿನ ಯುವಶಕ್ತಿ ಮಾದಕ ವ್ಯಸನಿಗಳಾಗುತ್ತಿದ್ದು, ಮೊಬೈಲ್ ಚಟಕ್ಕೂ ಬಲಿಯಾಗಿ ಬೇಡದ ವಿಚಾರಗಳಿಗೆ ದಾಸರಾಗುತ್ತಿದ್ದಾರೆ. ಆದ್ದರಿಂದ ಸ್ವಾಮಿ ವಿವೇಕಾನಂದರ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಮಾಜಿ ಯೋಧರಿಗೆ ಭೂಮಿಯ ಹಕ್ಕನ್ನು ನೀಡದೆ ಕಿರುಕುಳ ನೀಡಲಾಗುತ್ತಿದ್ದು, ಇದನ್ನು ಬಿಜೆಪಿ ಮಹಿಳಾ ಘಟಕ ತೀವ್ರವಾಗಿ ಖಂಡಿಸಲಿದೆ ಮತ್ತು ಮಾಜಿ ಯೋಧರ ಎಲ್ಲಾ ಹೋರಾಟಗಳಿಗೆ ಬೆಂಬಲ ನೀಡಲಿದೆ ಎಂದು ಯಮುನಾ ಚಂಗಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ, ಮಡಿಕೇರಿ ತಾಲೂಕು ಅಧ್ಯಕ್ಷೆ ಬಿ.ಕವಿತಾ ಬೆಳ್ಯಪ್ಪ ಹಾಗೂ ನಗರಾಧ್ಯಕ್ಷೆ ಅನಿತಾ ಪೂವಯ್ಯ ಉಪಸ್ಥಿತರಿದ್ದರು.