ಮಡಿಕೇರಿ, ಜ. 9: ಅಲ್ಲಿ ಸಂಸತ್ ಹಾಗೂ ವಿಧಾನಸಭೆಯ ಅಧಿವೇಶನ ಮೀರಿಸುವಂತಿತ್ತು. ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರು ತಮ್ಮ ಕಾರ್ಯ ವೈಖರಿಯಲ್ಲಿ ರಾಜಿ ಇಲ್ಲ ಎಂಬದನ್ನು ಸಾರುತ್ತಿದ್ದರು. ಆಡಳಿತ ಸದಸ್ಯರಿಂದ ಉತ್ತರ, ಪ್ರತಿಪಕ್ಷದ ಸದಸ್ಯರಿಂದ ಪ್ರತ್ಯುತ್ತರ, ಈ ಸನ್ನಿವೇಶಗಳು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಂಡುಬಂದದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯಬಹುದಾದ ಸಂಸದೀಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಯುವ ಸಂಸತ್ ಕಾರ್ಯಕ್ರಮದಲ್ಲಿ ಜಿಲ್ಲೆಯ 8 ಪ್ರೌಢಶಾಲೆಗಳ 63 ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮ ಆರಂಭದಲ್ಲಿ ಸಭಾಧ್ಯಕ್ಷರು, ಮುಖ್ಯಮಂತ್ರಿಯವರು, ವಿರೋಧ ಪಕ್ಷದ ನಾಯಕರು, ಗೃಹ, ಶಿಕ್ಷಣ, ಆರೋಗ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಅರಣ್ಯ, ಸಚಿವರ ಆಯ್ಕೆ ಪ್ರಕ್ರಿಯೆ ನಡೆಯಿತು.
ನಂತರ ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಕುಳಿತರು. ಸಭಾಧ್ಯಕ್ಷರು ತಮ್ಮ ಆಸನದಲ್ಲಿ ಕುಳಿತು ಸಭಾ ಕಾರ್ಯ ಕಲಾಪ ಆರಂಭಿಸಿದರು. ಸಂತಾಪ ಸೂಚನೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ, ವಿಧೇಯಕಗಳ ಮಂಡನೆ, ಅಲ್ಪಕಾಲಾವಧಿ ಚರ್ಚೆ ಹೀಗೆ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಪಕ್ಷಗಳ ಸದಸ್ಯರು
(ಮೊದಲ ಪುಟದಿಂದ) ಪ್ರಶ್ನೆಗಳನ್ನು ಕೇಳಿ ಸರ್ಕಾರದಿಂದ ಉತ್ತರ ಪಡೆಯುತ್ತಿದ್ದು ಗಮನ ಸೆಳೆಯಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದ ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅವರು ಭಾರತವು ಬಲಿಷ್ಠ ಪ್ರಜಾಪ್ರಭುತ್ವ ಸಂಸದೀಯ ಆಡಳಿತ ವ್ಯವಸ್ಥೆಯನ್ನು ಹೊಂದಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಂಸದೀಯ ವ್ಯವಸ್ಥೆಯಲ್ಲಿನ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಯುವ ಸಂಸತ್ ಹೆಸರಿನಡಿ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
‘ಯುವ ಸಂಸತ್ನಲ್ಲಿ ಮಕ್ಕಳು ಪಡೆಯುವ ಅನುಭವವನ್ನು ತಮ್ಮ ಶಾಲೆಗಳಲ್ಲಿ ಸಹಪಾಠಿಗಳೊಂದಿಗೆ ಹಂಚಿಕೊಳ್ಳುವಂತೆ ಸಲಹೆ ಮಾಡಿದರು. ಮಕ್ಕಳಿಗೆ ಚರ್ಚಾಸ್ಪರ್ಧಾ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ ಎಂದು ಸಿಇಓ ಅವರು ಅಭಿಪ್ರಾಯಪಟ್ಟರು.
ಡಯಟ್ ಪ್ರಾಂಶುಪಾಲರಾದ ದೊಡ್ಡಮಲ್ಲಪ್ಪ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಪರವಾಗಿ ಜನಪ್ರತಿನಿಧಿಗಳು ಆಡಳಿತ ನಡೆಸಲಿದ್ದಾರೆ. ಪ್ರಜಾಪ್ರಭುತ್ವ ಯಶಸ್ಸಿಗೆ ಜನಪ್ರತಿನಿಧಿಗಳ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಆರ್. ಬಸವರಾಜ ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ವಿದ್ಯಾರ್ಥಿ ದಿಸೆಯಿಂದಲೇ ಅರಿವು ಮೂಡಿಸಲು ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಶಾಖಾಧಿಕಾರಿಗಳಾದ ಗೀತಾ ಬಾಯಿ ಅವರು ಮಾತನಾಡಿ ಸಂಸದೀಯ ವ್ಯವಸ್ಥೆಯಲ್ಲಿ ಆರೋಗ್ಯಯುತ ವಾತಾವರಣ ನಿರ್ಮಾಣ ಮಾಡುವದು ಯುವ ಸಂಸತ್ನ ಉದ್ದೇಶವಾಗಿದೆ. ಮಕ್ಕಳಲ್ಲಿ ಈಗಿನಿಂದಲೇ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಶಾಖಾಧಿಕಾರಿಗಳಾದ ಗೀತಾ ಬಾಯಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಚಿದಾನಂದ, ಕ್ಷೀರಾಭಾಗ್ಯ ಯೋಜನೆಯ ಸಹಾಯಕ ನಿರ್ದೇಶಕರಾದ ಎಂ.ಕೃಷ್ಣಪ್ಪ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸ್ಪರ್ಧೆಯಲ್ಲಿ ತುಷಾಲಿ ಎ.ಎಲ್., ನಿಸರ್ಗ ಸಿ.ಬಿ., ತಾಸಿನಾ ಎಂ.ಎಸ್., ಇಂಪನ ವಿ.ಎಂ., ಜೀವಿತಾ ಇವರು ಪ್ರಶಸ್ತಿ ಪಡೆದಿದ್ದಾರೆ. ಇವರಲ್ಲಿ ಎ.ಎಲ್. ತುಷಾಲಿ ಮತ್ತು ನಿಸರ್ಗ ಇವರು ತಾ. 12 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ವಿಷಯ ಪರಿವೀಕ್ಷಕರಾದ ಬಿ.ಬಿ.ಸಾವಿತ್ರಿ ಅವರು ಕಾರ್ಯಕ್ರಮ ನಿರ್ವಹಿಸಿದರು. ದೇವನಾಯಕ್, ಚಂದ್ರ ಮಾಯಿಗೌಡ ಅವರು ಇದ್ದರು.