ಮಡಿಕೇರಿ, ಜ. 23: 2015-16 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡ ಜಿಲ್ಲೆಯ ಒಂದು ಯುವಕ ಸಂಘ, ಒಂದು ಯುವತಿ ಮಂಡಳಿಗೆ ಹಾಗೂ ಯುವಕ ಸಂಘ ಮತ್ತು ಯುವತಿ ಮಂಡಳಿಯ ಐವರಿಗೆ ವೈಯುಕ್ತಿಕ ಯುವ ಪ್ರಶಸ್ತಿಯನ್ನು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡಲಾಗುತ್ತಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದೆಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ.ಜೋಯಪ್ಪ ಹಾಗೂ ಕಾರ್ಯದರ್ಶಿ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಶಸ್ತಿಗಳನ್ನು ಫೆಬ್ರವರಿ ಎರಡನೇ ವಾರದಲ್ಲಿ ಮಡಿಕೇರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವ ಸಮ್ಮೇಳನ, ಯುವ ಕಾರ್ಯಾಗಾರ, ಯುವ ಸಮಾವೇಶ, ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನೀಡಲಾಗುವದೆಂದು ಹೇಳಿದ್ದಾರೆ.

ಅರ್ಜಿ ಸಲ್ಲಿಸುವವರು ಯುವಜನ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವಕ ಸಂಘ ಹಾಗೂ ಯುವತಿ ಮಂಡಳಿಯ ಸದಸ್ಯರಾಗಿರಬೇಕು. ಸಾಮಾಜಿಕ ಸೇವೆಗಳಾದ ಕ್ರೀಡೆ, ಯುವಜನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರಬೇಕು. ಪ್ರಶಸ್ತಿಗೆ 2015-16 ನೇ ಸಾಲಿನ ಸಂಘದ ಸಾಮಾಜಿಕ ಚಟುವಟಿಕೆಗಳನ್ನು ಪರಿಗಣಿಸಲಾಗುವದು. ಅರ್ಜಿ ನಮೂನೆಯನ್ನು ಸಹಾಯಕ ನಿದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಪಡೆದು ತಾ. 27 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ. ವೈಯಕ್ತಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ತಮ್ಮ ವಯಸ್ಸಿನ ದೃಢೀಕರಣ ಪತ್ರವನ್ನು ಲಗತ್ತಿಸತಕ್ಕದ್ದು. 18 ರಿಂದ 35 ವರ್ಷದ ಯುವಕ ಯುತಿಯರು ಅರ್ಜಿ ಸಲ್ಲಿಸಬಹುದಾಗಿದೆ. ಯುವ ಸಂಘ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಾವಣೆಗೊಂಡಿರಬೇಕು. ಈ ಪ್ರಶಸ್ತಿಯು ಪಾರಿತೋಷಕ, ಪ್ರಶಂಸನಾ ಪತ್ರ ಮತ್ತು ನಗದು ರೂ. 10 ಸಾವಿರ ಒಳಗೊಂಡಿರುತ್ತದೆ. ವೈಯಕ್ತಿಕ ಯುವ ಪ್ರಶಸ್ತಿಯು ಪಾರಿತೋಷಕ, ಪ್ರಶಂಸನಾ ಪತ್ರ ಮತ್ತು ನಗದು 5 ಸಾವಿರ ರೂ. ಒಳಗೊಂಡಿರುತ್ತದೆ. ಹೆಚ್ಚಿನ ವಿವರಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಡಿಕೇರಿ ಕಚೇರಿ ಅಥವಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಬಿ.ಜೋಯಪ್ಪ (99013 16315) ಹಾಗೂ ಕಾರ್ಯದರ್ಶಿ ಪಿ.ಪಿ.ಸುಕುಮಾರ್ (94812 13920) ಅವರುಗಳನ್ನು ಸಂಪರ್ಕಿಸಬಹುದಾಗಿದೆ.