ಕುಶಾಲನಗರ, ನ. 19: ಯುವಪೀಳಿಗೆಗೆ ವೇದಿಕೆ ಒದಗಿಸುವ ಮೂಲಕ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಸಾಧ್ಯ ಎಂದು ಹರಟೆ ಕಾರ್ಯಕ್ರಮ ಖ್ಯಾತಿಯ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು. ಅವರು ಸ್ಥಳೀಯ ಕಲಾಮೇಳ ಸಂಸ್ಥೆ ವತಿಯಿಂದ ಇಲ್ಲಿನ ರೈತ ಸಹಕಾರ ಭವನದಲ್ಲಿ ನಡೆದ 18ನೇ ವರ್ಷದ ಪ್ರೌಢಶಾಲಾ ಮಕ್ಕಳ ಕಲಾ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಾಲ್ಯದಲ್ಲೇ ಸಂಸ್ಕಾರ ರೂಡಿಸಿಕೊಂಡು ವಿದ್ಯೆ ಕಡೆಗೆ ಗಮನ ಹರಿಸಿ ಭವಿಷ್ಯದ ಗುರಿ ಕಡೆ ಲಕ್ಷ್ಯದೊಂದಿಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಪ್ರಸಕ್ತ ವಾತಾವರಣದಲ್ಲಿ ಕಂಡುಬರುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಆಹಾರ ಕ್ಷಾಮ ಎದುರಾಗುವ

ಸಾಧ್ಯತೆಗಳಿದ್ದು ಈ ಹಿನ್ನೆಲೆಯಲ್ಲಿ ಆಹಾರ ಸಂರಕ್ಷಣೆಯತ್ತ ಗಮನಹರಿಸ ಬೇಕು ಎಂದು ಕಣ್ಣನ್ ತಿಳಿಸಿದರು.

ಮದುವೆ ಮುಂತಾದ ಸಮಾರಂಭಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಬಳಸಿಕೊಂಡು ವ್ಯರ್ಥ ಮಾಡುವ ಕೆಟ್ಟ ಹವ್ಯಾಸಕ್ಕೆ ಪ್ರತಿಯೊಬ್ಬರೂ ಕಡಿವಾಣ ಹಾಕ ಬೇಕು. ಈ ಸಂಬಂಧ ಜನಸಾಮಾನ್ಯ ರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದರು.

ಕಲಾಮೇಳದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭರತನಾಟ್ಯ, ಸಮೂಹ ನೃತ್ಯ, ಪ್ರಬಂಧ, ಸ್ವ-ಇಚ್ಛಾ ಚಿತ್ರಕಲೆ, ಕಂಠಪಾಠ, ರಂಗೋಲಿ, ವಿಜ್ಞಾನ ಮಾದರಿ

ತಯಾರಿಕೆ, ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳು, ನಾಣ್ಯ - ನೋಟುಗಳ ಸಂಗ್ರಹಗಳು, ಮಣ್ಣಿನ ಮಾದರಿ ರಚನೆ, ಹಾಗೂ ಜನಪದಗೀತೆ ಗಾಯನ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಲಾಮೇಳ ಸಂಸ್ಥೆಯ ಅಧ್ಯಕ್ಷ ಎನ್.ಕೆ. ಮೋಹನ್‍ಕುಮಾರ್, ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಕೆ.ವಿ.ಸುರೇಶ್ ಇದ್ದರು.