ಮಡಿಕೇರಿ, ನ. 14: ಗ್ರಾಮೀಣ ಕಲೆ, ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಯುವಜನೋತ್ಸವಗಳಿಂದ ಆಗುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೊಂಬಾರನ ಜಿ. ಬೋಪಯ್ಯ ಹೇಳಿದರು,
ಜಿಲ್ಲಾಡಳಿತ, ಜಿ.ಪಂ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಒಕ್ಕೂಟ, ನೇತಾಜಿ ಯುವಕ ಹಾಗೂ ಯುವತಿ ಮಂಡಳಿಯ ಆಶ್ರಯದಲ್ಲಿ ತಾಳತ್ಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಜಿಲ್ಲಾ ಯುವ ಜನೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡಿದರು. ಯುವ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದು ಒಳ್ಳೆಯದು, ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಈ ಯೋಜನೆ ಉತ್ತಮವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಯಾಲದಾಳು ಪದ್ಮಾವತಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಯಂ.ಬಿ. ಜೋಯಪ್ಪ, ಮದೆ ಗ್ರಾ.ಪಂ. ಸದಸ್ಯ ಗಿರೀಶ್ ತಾಳತ್ಮನೆ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ವೀರಾಜಪೇಟೆ ಅಧ್ಯಕ್ಷೆ ಶೀಲಾ ಬೋಪಣ್ಣ, ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ಅಧ್ಯಕ್ಷರುಗಳಾದ ಮಹಮ್ಮದ್ ರಫಿಕ್ ಹಾಗೂ ನೇತ್ರಾವತಿ ಹಾಜರಿದ್ದರು.